Advertisement

ಪೊಲೀಸ್‌ ದಬ್ಬಾಳಿಕೆ ವಿರುದ್ಧ ಹೆಚ್ಚು ಕೇಸ್‌

12:06 PM Aug 04, 2018 | Team Udayavani |

ಬೆಂಗಳೂರು: ಮಾನವ ಹಕ್ಕು ಉಲ್ಲಂಘನೆ ಸಂಬಂಧ ಪೊಲೀಸ್‌ ಇಲಾಖೆ ದಬ್ಬಾಳಿಕೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳೇ ಹೆಚ್ಚು ದಾಖಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಹೇಳಿದರು.

Advertisement

ವಿಕಾಸಸೌಧದಲ್ಲಿ ಎರಡು ದಿನ ನಡೆದ ಮಾನವ ಹಕ್ಕುಗಳ ಆಯೋಗದ ಬಹಿರಂಗ ವಿಚಾರಣಾ ಸಭೆ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾನವ ಹಕ್ಕು ಉಲ್ಲಂಘನೆ ಕುರಿತಂತೆ ದಾಖಲಾದ 185 ದೂರುಗಳ ಪೈಕಿ 106 ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.

ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಕೆಯಾಗಿವೆ. ಪೊಲೀಸ್‌ ಇಲಾಖೆ ದಬ್ಬಾಳಿಕೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ದೌರ್ಜನ್ಯ ಸಂಬಂಧವೂ ದೂರುಗಳು ಬಂದಿವೆ ಎಂದು ಹೇಳಿದರು.

ಬೆಂಗಳೂರಿನ ಕೋರಮಂಗಲ- ಚಲ್ಲಘಟ್ಟ (ಕೆ.ಸಿ.ವ್ಯಾಲಿ) ಕಣಿವೆ ಮೂಲಕ ಕೋಲಾರದ ಕೆರೆಗಳಿಗೆ ಕೊಳಚೆ ನೀರು ಪೂರೈಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಈ ವಿಷಯದಲ್ಲಿ ಯಾವುದೇ ದೂರು ಬಂದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಮಾನವ ಹಕ್ಕು ರಕ್ಷಣೆ ಹೆಸರಿನ ದುರ್ಬಳಕೆ ಇಲ್ಲವೇ ಲಾಂಛನ ದುರ್ಬಳಕೆ ಮಾಡಿಕೊಳ್ಳುವ ಸಂಘಟನೆ, ವೇದಿಕೆಗಳ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು. ಮಾನವ ಹಕ್ಕುಗಳ ರಕ್ಷಣೆ ಹೆಸರಿನಲ್ಲಿ ನಕಲಿ ಸಂಘಟನೆ, ವೇದಿಕೆಗಳು ಕಾರ್ಯ ನಿರ್ವಹಿಸುತ್ತಿವೆ ಎಂಬ ಬಗ್ಗೆ ಮಾಹಿತಿಯಿದ್ದು, ಲಿಖೀತ ದೂರು ಸಲ್ಲಿಕೆಯಾಗದೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಐದು ಲಕ್ಷ ರೂ. ಪರಿಹಾರಕ್ಕೆ ಸೂಚನೆ

Advertisement

ಮಾನವ ಹಕ್ಕು ಉಲ್ಲಂಘನೆ ಪ್ರಕರಣವೊಂದರಲ್ಲಿ ಐದು ಲಕ್ಷ ರೂ. ಪರಿಹಾರ ನೀಡುವಂತೆ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ. ದಲಿತರ ಭೂಮಿ ಅತಿಕ್ರಮಣ ಪ್ರಕರಗಳಲ್ಲೂ ನ್ಯಾಯ ಒದಗಿಸಲಾಗಿದೆ ಎಂದು ವಿವರ ನೀಡಿದರು.

ಮೆಟ್ರೋ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಂತೆ ಕೆಐಎಡಿಬಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಎಂಬ ಕಾರಣಕ್ಕೆ ಇದು ಮಾನವ ಹಕ್ಕು ಉಲ್ಲಂಘನೆಯಾಗದು ಎಂಬುದಾಗಿ ಅಭಿಪ್ರಾಯಪಡಲಾಗಿದ್ದು, ಒಂದು ತಿಂಗಳಲ್ಲಿ 14 ಲಕ್ಷ ರೂ. ಪರಿಹಾರ ವಿತರಣೆಗೆ ಸೂಚಿಸಲಾಗಿದೆ. ಒಂದೊಮ್ಮೆ ಪರಿಹಾರ ನೀಡದಿದ್ದರೆ ಆಯೋಗಕ್ಕೆ ದೂರು ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಯುವತಿಗೆ ಒಂದು ಲಕ್ಷ ರೂ. ಪರಿಹಾರ ವಿತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದ್ದು, ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನಿವೃತ್ತ ನ್ಯಾಯಮೂರ್ತಿ ಮುರುಗೇಶನ್‌, ಸದಸ್ಯೆ ಜ್ಯೋತಿಕಾ ಖೈರಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next