ಹರಿಯಾಣ: 2014ರ ಹರಿಯಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ, ತಮ್ಮ ರಾಜ್ಯದ ಮದುವೆಯಾಗದ ಯುವಕರಿಗೆ ಸೂಕ್ತ ವಧು ಹುಡುಕಿಕೊಡುವ ವಾಗ್ಧಾನ ನೀಡಿ ವಿವಾದಕ್ಕೊಳಗಾಗಿದ್ದ ಆ ರಾಜ್ಯದ ಹಾಲಿ ಕೃಷಿ ಮತ್ತು ಪಂಚಾಯತ್‌ಸಚಿವ ಓಂ ಪ್ರಕಾಶ್ ಧನ್ಕರ್, ಅಂಥದ್ದೇ ವಿಚಾರವನ್ನು ಪುನಃ ಪ್ರಸ್ತಾವಿಸಿ, ಮತ್ತೆ ಸುದ್ದಿಯಾಗಿದ್ದಾರೆ.
ಝಜ್ಜರ್‌ನಲ್ಲಿ ಶುಕ್ರವಾರ ಮಾತನಾಡಿದ್ದ ಅವರು, “ಗ್ರಾಮೀಣ ಭಾಗದ ಯುವಕರು ತಮ್ಮ ಹಳ್ಳಿಯನ್ನು ಸ್ವತ್ಛ ಹಾಗೂ ಸುಂದರವಾಗಿರಿಸಿಕೊಂಡರೆ ಅವರಿಗೆ ಉತ್ತಮ ವಧು ಸಿಗುವ ಅವಕಾಶಗಳು ಹೆಚ್ಚಾಗುತ್ತವೆ” ಎಂದು ಹೇಳಿದ್ದಾರೆ.
ಎಪ್ರಿಲ್‌ನಿಂದ, ಸ್ವತ್ಛ ಗ್ರಾಮಗಳಿಗೆ ಸ್ಟಾರ್ ರೇಟಿಂಗ್ ಕೊಡುವ ಹೊಸ ಯೋಜನೆಯನ್ನು ಅವರ ಇಲಾಖೆ ಅನುಷ್ಠಾನಗೊಳಿಸಲಿದ್ದು, ಪ್ರತಿ ಗ್ರಾಮಕ್ಕೆ ಅವುಗಳ ನೈರ್ಮಲ್ಯ ಮಟ್ಟ ಆಧರಿಸಿ, ಮೂರು, ಐದು ಅಥವಾ ಏಳು ಸ್ಟಾರ್ ನೀಡಲಾಗುತ್ತದೆ.
ಇದನ್ನು ತಮ್ಮ ಭಾಷಣದಲ್ಲಿ ವಿವರಿಸಲು ಯತ್ನಿಸಿದ್ದ ಧನ್ಕರ್, ” ಉತ್ತಮ ರೇಟಿಂಗ್ ಪಡೆಯುವ ಹಳ್ಳಿಗಳಿಗೆ ಹೆಣ್ಣು ಕೊಡಲು ಜನ ಮುಂದೆ ಬರುತ್ತಾರೆ” ಎಂದಿದ್ದಾರೆ.
ಯುವಕ-ಯುವತಿಯರ ಅನುಪಾತದ ಪಟ್ಟಿಯಲ್ಲಿ ಹರಿಯಾಣ, ದೇಶದಲ್ಲೇ ಕೊನೆಯ ಸ್ಥಾನ ಪಡೆದಿದೆ. ಅಲ್ಲಿ, ಪ್ರತಿ 1000 ಯುವಕರಿಗೆ 879 ಯುವತಿಯರಿದ್ದು ಹೆಣ್ಣು ಸಿಗುವುದೇ ಕಷ್ಟ ಎಂಬಂತಾಗಿದೆ.