ನವದೆಹಲಿ: ಬಿಜೆಪಿ ಚುನಾವಣೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದಷ್ಟೂ; ಪ್ರತಿಪಕ್ಷಗಳು ಕೆಸರೆರಚಾಟವನ್ನು ಜಾಸ್ತಿ ಮಾಡುತ್ತಲೇ ಹೋಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮೂರು ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ತ್ರಿಪುರಾದಲ್ಲಿ ಸ್ವತಂತ್ರವಾಗಿ, ಮೇಘಾಲಯದಲ್ಲಿ ಮಿತ್ರಪಕ್ಷದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಿತು. ಇನ್ನು ನಾಗಾಲ್ಯಾಂಡ್‌ನಲ್ಲಿ ಚುನಾವಣೋತ್ತರ ಮೈತ್ರಿ ಮೂಲಕ ಬಿಜೆಪಿ ಅಧಿಕಾರಕ್ಕೇರಿತು. ಈ ಫಲಿತಾಂಶ ಬಂದ ಮೇಲೆ ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರುವುದು ಜೋರಾಗಿದೆ ಎಂದು ಮೋದಿ ಪ್ರತಿಪಕ್ಷಗಳ ಹೋರಾಟವನ್ನು ವ್ಯಾಖ್ಯಾನಿಸಿದ್ದಾರೆ.
ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು. ಏ.4ರ ಬಿಜೆಪಿ ಸಂಸ್ಥಾಪನಾ ದಿನದಿಂದ ಆರಂಭಿಸಿ, ಏ.14ರ ಅಂಬೇಡ್ಕರ್ ಜನ್ಮದಿನಾಚರಣೆವರೆಗೆ ಸಾಮಾಜಿಕ ನ್ಯಾಯ ಸಪ್ತಾಹ ಆಚರಿಸಬೇಕು. ಮೇ 15ರಿಂದ ಜೂ.15ರವರೆಗೆ ಬಿಜೆಪಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಓಡಾಡಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ಮೋದಿ ಸೂಚಿಸಿದ್ದಾರೆ.
ಭೂತಾಯಿಯನ್ನು ಸಂರಕ್ಷಿಸಿ:
ಭೂತಾಯಿಯನ್ನು ಸಂರಕ್ಷಿಸಿ. ಆಕೆ ನಮಗೆ ಮರಗಳು, ಕಾಳುಗಳು, ಇನ್ನಿತರೆ ಸಂಗತಿಗಳ ಮೂಲಕ ಸಹಾಯ ಮಾಡುತ್ತಾಳೆ. ರಾಜಕಾರಣಿಗಳು ರಾಜಕೀಯೇತರ ಸಂಗತಿಗಳಿಗಾಗಿಯೂ ಕೆಲಸ ಮಾಡಬೇಕು. ತಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಬೇಟಿ ಬಚಾವೊ ಆಂದೋಲನ ನಡೆಸಿದ್ದೆ. ಆಗ ಲಿಂಗಾನುಪಾತದಲ್ಲಿ ಉತ್ತಮ ಸಾಧನೆ ಆಯಿತು ಎಂದೂ ಮೋದಿ ತಿಳಿಸಿದ್ದಾರೆ.