Advertisement
ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅನಿವಾರ್ಯತೆಯಿದೆ ಎಂಬ ಕೂಗು ಹೊಸ ಸಂಗತಿಯಲ್ಲ. ಶಾಲೆಗಳಲ್ಲಿ ಇದು ಬೇಕು ಎಂಬ ಬಗ್ಗೆ ವಿವಾದಗಳಿಲ್ಲ. ಹೇಗೆ ಅಳವಡಿಸುವುದು, ಅದಕ್ಕೆ ಬೇಕಾಗುವ ಪಠ್ಯ ಯಾವುದು….? ಈ ವಿಷಯವಾಗಿ ವಾದ ವಿವಾದಗಳು ಇವೆ. ನೈತಿಕ ಶಿಕ್ಷಣಕ್ಕೆ ಶಾಲೆಗಳಲ್ಲಿ, ಆಯಾ ತರಗತಿಗಳಿಗೆ ಈಗಾಗಲೇ ಇರುವ ಪಠ್ಯಗಳೇ ಸಾಲದೇ ಅಥವಾ ನೈತಿಕ ಶಿಕ್ಷಣದ ಹೆಸರಲ್ಲಿ ಇನ್ನಷ್ಟು ಪಠ್ಯಗಳ ಭಾರವನ್ನು ಮಕ್ಕಳಿಗೆ ಹೊರಿಸುವುದೇ….? ಎಂಬ ಪ್ರಶ್ನೆಗಳೂ ಇವೆ. ಇರುವ ಪಠ್ಯಗಳ ಬಗ್ಗೆಯೇ ಚರ್ಚೆ, ವಾದಗಳು. ಇನ್ನೂ ಹೆಚ್ಚುವರಿಯಾಗಿ ಅದೂ ನೈತಿಕ ಶಿಕ್ಷಣದ ಹೆಸರಲ್ಲಿ ಪಠ್ಯಗಳನ್ನು ಅಳವಡಿಸ ಹೊರಟರೆ ಶಾಲೆಗಳ ಗತಿ, ಮಕ್ಕಳ ಪರಿಸ್ಥಿತಿ ಏನಾದೀತು…? ಮತ್ತೆ ಪ್ರಶ್ನೆಗಳೇ…
Related Articles
Advertisement
ನೈತಿಕತೆ ಸಾಮಾಜಿಕ ವ್ಯವಸ್ಥೆಯ ತಳಪಾಯವಾಗಬೇಕು. ಹೇಗೆ ಆರ್ಥಿಕ ಸಂಪತ್ತನ್ನು ಅಭಿವೃದ್ಧಿ ಎನ್ನುತ್ತೇವೊಅಂತೆಯೇ ಸಮುದಾಯದ ನೈತಿಕತೆ ಮಟ್ಟವೂ ಅಭಿವೃದ್ಧಿಯ ಭಾಗವಾಗಿ ಲೆಕ್ಕ ಹಾಕಲ್ಪಡಬೇಕು. ಕೇವಲ ಆರ್ಥಿಕತೆಯ ಲೆಕ್ಕಾಚಾರ, ಸಂಪತ್ತಿನ ಸಂಗ್ರಹ, ವಾಣಿಜ್ಯ ದೃಷ್ಟಿಕೋನದ ಅಭಿವೃದ್ಧಿಯನ್ನೇ ಅಭಿವೃದ್ಧಿ ಎನ್ನುವುದು ಪಾರ್ಶ್ವ ಪೀಡಿತ, ರೋಗಗ್ರಸ್ತ ವ್ಯವಸ್ಥೆ. ಅದು ಹೆಚ್ಚಾಗುವಿಕೆ ಅಷ್ಟೆ ಬೆಳವಣಿಗೆಯಲ್ಲ.
ಶಿಕ್ಷಣ ಎಲ್ಲದಕ್ಕೂ ತಳಪಾಯ. ಅದಕ್ಕಾಗಿ ಶೈಕ್ಷಣಿಕವಾಗಿ ಏನು ಮಾಡಬೇಕು ಎಂಬುದೇ ದೊಡ್ಡ ಸವಾಲು. ಸದ್ಯದ ಶೈಕ್ಷಣಿಕ ಪರಿಸರದಲ್ಲಿ ಇದು ಅಪ ರಿಹಾರ್ಯ. ಪರಿಹಾರಾತ್ಮಕ ವಾಗಿ ಹೇಳುವುದಾದರೆ, ನೈತಿಕ ಶಿಕ್ಷಣಕ್ಕೆ ಈಗಿರುವ ಪಠ್ಯಗಳೇ ಸಾಕು. ಪ್ರತೀ ತರಗತಿಗಳ, ಪ್ರತೀ ಪಾಠಗಳಿಗೆ ಅದರದ್ದೇ ಆದ ಆಶಯಗಳಿವೆ. ಆ ಆಶಯಗಳೇ ನೈತಿಕತೆಯನ್ನು (ನೈತಿಕತೆ ಎಂದರೇನು ಎಂಬುದು ಬೇರೆಯೇ ವಿಚಾರ)ಬೆಳೆಸುವ, ಬದುಕಿನ ಅನುಭವ ನೀಡುವ, ವಾಸ್ತವ ಪ್ರಪಂಚದ ಅರಿವು ಮೂಡಿಸುವ, ನಾಗರಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ, ಶ್ರಮ ಮತ್ತು ಕುಟುಂಬ ಸಂಸ್ಕೃತಿಯನ್ನು ಪೋಷಿಸುವ, ರಾಷ್ಟ್ರಭಕ್ತಿಯನ್ನು ಉದ್ದೀಪಿಸುವುದೇ ಮೊದಲ ವೈಯಕ್ತಿಕ ಮತ್ತು ಸಾಮುದಾಯಿಕ ನೈತಿಕತೆಯ ಪಾಠಗಳೇ ಆಗಿವೆ. ಮೊದಲಾಗಿ ಇಂತಹ ಆಶಯಗಳನ್ನು ಈಡೇರಿಸುವ ನೆಲೆ ಯಲ್ಲಿ ಬೋಧನಾ ಪ್ರಕ್ರಿಯೆಗಳು ನಡೆಯುವಂತೆ ಮಾಡಲು ಶೈಕ್ಷಣಿಕ ವ್ಯವಸ್ಥೆಯನ್ನು ಬದಲು ಮಾಡಬೇಕು. ಇವತ್ತು ಶಾಲೆಗಳೆಲ್ಲ ಕೇವಲ ಅಂಕಕ್ಕಾಗಿ, ಪಾಸು ಮಾಡು ವುದಕ್ಕಾಗಿ, ಸ್ಪರ್ಧೆಗಾಗಿ, ಔದ್ಯೋಗಿಕ ಉದ್ದೇಶಗಳಿಗಾಗಿ ಮಕ್ಕಳನ್ನು ತಯಾರು ಮಾಡುವ ಅಖಾಡಗಳಾಗಿವೆ. ಇದನ್ನು ಬದಲಾಯಿಸಲು ಕಲಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು. ಕೊರತೆಯಲ್ಲೇ ಸಾಗುವ ಶಾಲೆಗಳನ್ನು ಯಾವುದೇ ತಾರತಮ್ಯವಿಲ್ಲದೆ, ಏಕರೂಪದ ಶೈಕ್ಷಣಿಕ ವ್ಯವಸ್ಥೆಯಡಿಗೆ ತರಬೇಕು. ಪಾಸು-ಫೈಲಿಗಷ್ಟೇ (ಶೈಕ್ಷಣಿಕವಾಗಿ ಫೈಲು ಎಂಬ ವ್ಯವಸ್ಥೆ ಅವೈಜ್ಞಾನಿಕ, ಅನೈತಿಕ) ಸೀಮಿತವಾಗಿರುವ ಪರೀಕ್ಷೆ ಫಲಿತಾಂಶ ಪದ್ಧತಿಯನ್ನು ಕೈಬಿಡಬೇಕು. ಶೈಕ್ಷಣಿಕ ಆದ್ಯತೆಗಳೆಲ್ಲ ಮಗು ಕೇಂದ್ರಿತವಾಗಿ ಮರು ನಿರೂಪಿತವಾಗಬೇಕು ಮತ್ತು ನಾವೆಲ್ಲ ಬಯಸುವ, ನಿರೀಕ್ಷಿಸುವ ನೈತಿಕತೆಯನ್ನು ಬೆಳೆಸುವ ತಳಪಾಯದಲ್ಲಿ ಶಿಕ್ಷಣ ಸಂಸ್ಥೆಗಳು ಬದಲಾಗಬೇಕು. - ರಾಮಕೃಷ್ಣ ಭಟ್,
ಚೊಕ್ಕಾಡಿ ಬೆಳಾಲು