Advertisement

ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ಮೂರ್ಜೆ ಸುನಿತಾ ಪ್ರಭು

08:14 PM Jan 23, 2020 | Hari Prasad |

ಬೆಳ್ತಂಗಡಿ: ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ಬೆಳ್ತಂಗಡಿ ಮೂಲದ ಮೂರ್ಜೆ ಸುನೀತಾ ಪ್ರಭು ಅವರು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡ ಮಾಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ಅವರಿಂದ ಸ್ವೀಕರಿಸಿದರು.

Advertisement

ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಗಮನ ಸೆಳೆದ ಬಾಲ ಪ್ರತಿಭೆ ಸುನೀತಾ ಅವರು ಜ. 26ರಂದು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಆಗುವ ಅವಕಾಶವನ್ನು ಪಡೆದಿದ್ದಾರೆ.

ಬೆಳ್ತಂಗಡಿಯ ಉದ್ಯಮಿ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿಯಾಗಿರುವ ಸುನೀತಾ ಪ್ರಭು ಪ್ರಸಕ್ತ ಮಂಗಳೂರಿನ ಸಿ.ಎಫ್.ಏ.ಎಲ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಈಕೆ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ (ಸಿಬಿಯಸ್‌ಸಿ) ಹಳೆ ವಿದ್ಯಾರ್ಥಿನಿ.


ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸುನೀತಾ ಪ್ರಭು ಅವರು ಅನ್ವೇಷಿಸಿರುವ ಸೊಳ್ಳೆ ನಿವಾರಕ ಸಾಧನವನ್ನು ಪುಣೆಯ ಐ.ಐ.ಎಸ್‌.ಇ.ಆರ್. ಮತ್ತು ಎನ್‌.ಸಿ.ಎಲ್‌.ನಲ್ಲಿ ಪರೀಕ್ಷಿಸಿ ಅಭಿವೃದ್ದಿ ಪಡಿಸಲಾಯಿತು. ಕಡಿಮೆ ವೆಚ್ಚದ ಈ ಸಾಧನ ಆರೋಗ್ಯ ಸಮಾಜಕ್ಕೆ ಮಹತ್ತರ ಪಾತ್ರವಹಿಸಿದೆ.

ಇದೇ ಪ್ರಾಜೆಕ್ಟ್ 2018 ರಲ್ಲಿ ದೆಹಲಿಯಲ್ಲಿ ನಡೆದ ಐ.ಆರ್‌.ಐ.ಎಸ್. ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ರಾಷ್ಟ್ರೀಯ ಗ್ರ್ಯಾಂಡ್ ಪ್ರಶಸ್ತಿ ಗಳಿಸಿದೆ. 2019ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಬಾಲ ಪುರಸ್ಕಾರ ಲಭಿಸಿದೆ.

ಈ ಹಿಂದೆ ಈಕೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೇಸ್ಸಿನಲ್ಲಿ ಭಾಗವಹಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಆವಿಷ್ಕಾರದ ಮೇಲೆ ಪ್ರಾಜೆಕ್ಟ್ ಮಂಡಿಸಿದ್ದರು. ಇದಲ್ಲದೆ ಇವರ ಸಂಶೋಧನೆಯ ರಿಮೋಟ್ ಕಂಟ್ರೋಲ್ ರಬ್ಬರ್ ಟ್ಯಾಪಿಂಗ್ ಯಂತ್ರವು ವ್ಯಾಪಕ ಶ್ಲಾಘನೆಗೆ ಒಳಗಾಗಿದ್ದು ಮತ್ತು ಬೆಂಗಳೂರಿನ ಶಿಕ್ಷಕರ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಪರ್ಧೆಯಲ್ಲಿಯೂ ಈ ಪ್ರಾಜೆಕ್ಟನ್ನು ಮಂಡಿಸಿದ್ದರು. ಪ್ರತಿಭಾನ್ವಿತೆಯಾದ ಈಕೆ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next