Advertisement

ಚಂದ್ರಗ್ರಹಣ ವೀಕ್ಷಣೆಗೆ ತೆರೆದುಕೊಳ್ಳಲಿದೆ ತಾರಾಲಯ

12:12 PM Jul 26, 2018 | |

ಬೆಂಗಳೂರು: ಭೂಮಿ ಹಾಗೂ ಚಂದ್ರ ಗ್ರಹಗಳ ನಡುವಿನ ನೆರಳಿನಾಟದಿಂದಾಗಿ ಪ್ರಸಕ್ತ ವರ್ಷ ಎರಡನೇ ಬಾರಿ, ಜು.27, 28ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಗ್ರಹಣ ವೀಕ್ಷಣೆಗೆ ನಗರದ ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.  

Advertisement

ಚಂದ್ರಗ್ರಹಣ ವೀಕ್ಷಿಸಲು ನೆಹರು ತಾರಾಲಯಕ್ಕೆ ಭೇಟಿ ನೀಡುವ ಸಾರ್ವಜನಿಕರಿಗಾಗಿ ತಾರಾಲಯದ ಆವರಣದಲ್ಲಿ ದೂರದರ್ಶಕ ಹಾಗೂ ದುರ್ಬೀನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಆದರೆ, ಪೂರಕ ವಾತಾವರಣವಿದ್ದರೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಇಲ್ಲದಿದ್ದರೆ ಪ್ರೊಜೆಕ್ಟರ್‌ ಮೂಲಕ ನೇರ ಪ್ರಸಾರ ಮಾಡಲಾಗುವುದು ಎಂದು ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಮಂಗಳನಿಗೆ ಮತ್ತಷ್ಟು ಪ್ರಕಾಶ: ಜು.27ರಂದು ಭೂಮಿ ಹಾಗೂ ಮಂಗಳ ಗ್ರಹಗಳು ತಮ್ಮ ಕಕ್ಷೆಗಳಲ್ಲಿ ಸುತ್ತುವ ಸಂದರ್ಭದಲ್ಲಿ ಒಂದು ಕಡೆ ಹತ್ತಿರವಾಗಲಿವೆ. ಪರಿಣಾಮ ಸದಾ ತನ್ನ ಕೆಂಪು ಬಣ್ಣದಿಂದ ಪ್ರಕಾಶಿಸುವ ಮಂಗಳ ಗ್ರಹವು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯಲಿರುವುದು ವಿಶೇಷ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವಿಜ್ಞಾನ ಸಂಬಂಧಿತ ಸಂಘ, ಸಂಸ್ಥೆಗಳು, ವಿಜ್ಞಾನ ಕೂಟಗಳು “ಲೈವ್‌ ಟೆಲಿಕಾಸ್ಟ್‌’ ವೀಕ್ಷಣೆಗೆ ಸಜ್ಜಾಗಿದ್ದಾರೆ.

ಪ್ರತ್ಯೇಕ ಕಕ್ಷೆಗಳಲ್ಲಿ ಸುತ್ತುವ ಸೂರ್ಯ, ಭೂಮಿ ಹಾಗೂ ಚಂದ್ರ ಕಕ್ಷೆಯ ಒಂದೇ ಭಾಗದಲ್ಲಿ ಎದುರಾದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣ ಉಂಟಾಗುತ್ತದೆ. ಸಾಮಾನ್ಯವಾಗಿ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುವುದರಿಂದ ಪೂರ್ಣಚಂದ್ರ ಗ್ರಹಣವಾಗುತ್ತದೆ. ಈ ವೇಳೆ ಚಂದ್ರ ಸಂಪೂರ್ಣ ಕೆಂಪಾಗಲಿದ್ದಾನೆ. 

ಒಂದೇ ವರ್ಷದಲ್ಲಿ ಎರಡನೇ ಬಾರಿ ಸಂಭವಿಸುತ್ತಿರುವ ಚಂದ್ರಗ್ರಹಣ ಇದಾಗಿದ್ದು, ಈ ಮೊದಲು ಜ.31ರಂದು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಗ್ರಹಣ ದೃಶ್ಯ ಕಾಣಿಸಿಕೊಂಡಿತ್ತು. ಆದರೆ, ಜು.27ರಂದು ಸಂಭವಿಸಲಿರುವ ಗ್ರಹಣವು ಬರೊಬ್ಬರಿ 103 ನಿಮಿಷ ಇರಲಿದ್ದು, ಈ ಸಂದರ್ಭದಲ್ಲಿ ಚಂದ್ರ ಸಂಪೂರ್ಣ ಕೆಂಪುವಾಗುವುದನ್ನು ನೋಡಲು ಮನಮೋಹಕವಾಗಿರುತ್ತದೆ ಎಂಬುದು ವಿಜ್ಞಾನಿಗಳ ಮಾತು.

Advertisement

ಜು.27ರ ರಾತ್ರಿ 11.54ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಸಂಪೂರ್ಣ ಗ್ರಹಣದ ಹಂತ ತಲುಪಲಿದೆ. 1 ಗಂಟೆಯಿಂದ ನಸುಕಿನ 2.43ರವರೆಗೆ ಚಂದ್ರ ಸಂಪೂರ್ಣವಾಗಿ ರಕ್ತದ ಬಣ್ಣದಲ್ಲಿ ಗೋಚರಿಸಲಿದ್ದು, ಜು.28ರ ನಸುಕಿನ 3.49 ಗಂಟೆಗೆ ಗ್ರಹಣ ಬಿಡಲಿದೆ ಎಂದು ಜವಾಹರ್‌ಲಾಲ್‌ ನೆಹರು ತಾರಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎರಡು ವರ್ಷ ಕಾಯಬೇಕು: ಸಾಮಾನ್ಯವಾಗಿ ಸೂರ್ಯ ಹಾಗೂ ಚಂದ್ರ ಗ್ರಹಣಗಳು ಪ್ರತಿ ವರ್ಷ ಸಂಭವಿಸುತ್ತಿರುತ್ತವೆ. ಆದರೆ, ಒಂದೊಂದು ದೇಶದಲ್ಲಿ ಅದು ಕಾಣಸಿಗುವುದಿಲ್ಲ. ಭಾರತದಲ್ಲಿ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಚಂದ್ರಗ್ರಹಣ ಸಂಭವಿಸುತ್ತಿದೆ. ಆದರೆ, ಇದರ ನಂತರದಲ್ಲಿ ಮತ್ತೆ ಎರಡು ವರ್ಷ ಭಾರತದಲ್ಲಿ ಚಂದ್ರಗ್ರಹಣ ಕಾಣಸಿಗುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಿದರೆ ಕಣ್ಣಿಗೆ ಹಾನಿಯಾಗುತ್ತದೆ. ಆದರೆ, ಜು.27ರ ಗ್ರಹಣವನ್ನು ಬರಿಗಣ್ಣಿನಿಂದಲೇ ನೋಡಬಹುದು. ಚಂದ್ರಗ್ರಹಣದ ದಿನ ಕೆಂಪು ಬಣ್ಣದ ಚಂದ್ರ ಹಾಗೂ ಅದರ ಕೆಳಗೆ ಕೆಂಪು ಬಣ್ಣದ ಮಂಗಳ ಗ್ರಹ ಪ್ರಕಾಶಮಾನವಾಗಿ ಬೆಳಗಲಿರುವುದು ಈ ಬಾರಿಯ ವಿಶೇಷ.
-ಪ್ರಮೋದ್‌ ಜಿ. ಗಲಗಲಿ, ನಿರ್ದೇಶಕ, ನೆಹರು ತಾರಾಲಯ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next