Advertisement

ಮೂಡುಬಿದಿರೆ: ಪಾರ್ಕಿಂಗ್‌, ತ್ಯಾಜ್ಯ ವಿಲೇವಾರಿಗೆ ಕ್ರಮವಹಿಸದವರ ವಿರುದ್ಧ ತೀವ್ರ ಆಕ್ಷೇಪ

10:29 PM Jan 09, 2023 | Team Udayavani |

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವಾಗ ಡ್ರೈನೇಜ್‌, ಸೆಟ್‌ಬ್ಯಾಕ್‌, ಪಾರ್ಕಿಂಗ್‌ ಇದೆಯೋ ಎಂಬುದನ್ನು ಎಂದು ಪರಿಶೀಲಿಸದೆ ಸಮಸ್ಯೆಯಾಗುತ್ತಿದೆ. ಕಟ್ಟಿದ ಬಳಿಕ ಪುರಸಭೆಯ ಇಲ್ಲವೇ ಇತರರ ಬೆಂಬಲದಿಂದ ಎಲ್ಲವೂ ಓಕೆ ಆಗಿಬಿಡುತ್ತಿದೆ’ ಎಂದು ಎಂದು ಸೋಮವಾರ ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Advertisement

ವಿಶೇಷವಾಗಿ ಗಾಂಧಿನಗರದಲ್ಲಿರುವ ವಸತಿ ಸಂಕೀರ್ಣಗಳ ಬಗ್ಗೆ ವಾರ್ಡ್‌ ಸದಸ್ಯೆ ದಿವ್ಯಾ ಜಗದೀಶ್‌ ಪ್ರಸ್ತಾವಿಸಿ, “ನಮಗೆ ಪುರಸಭೆಯಲ್ಲಿ ಜನ ಇದ್ದಾರೆ, ನೀವು ಮಾಡುವುದು ಮಾಡಿ’ ಎಂದು ಪುರಸಭೆ ಸದಸ್ಯರಾದ ನಮಗೇ ಮಾತನಾಡುತ್ತಾರೆ. ನಮಗೆ ಈಗ ಅವರ ಪರವಾಗಿ ಪುರಸಭೆಯಲ್ಲಿರುವ ಜನ ಯಾರು ಅಂತ ಹೇಳಿ’ ಎಂದು ಅಧ್ಯಕ್ಷರಲ್ಲಿ ನೇರವಾಗಿ ಎರಡೆರಡು ಬಾರಿ ಕೇಳಿದರು. ಜಿ.ವಿ. ಪೈ ರಸ್ತೆ-ದೊಡ್ಮನೆ ರಸ್ತೆ ಪರಿಸರದಲ್ಲಿರುವ ವಾಣಿಜ್ಯ, ವಸತಿ ಸಂಕೀರ್ಣಗಳಿಂದ ಹೊರಸೂಸುತ್ತಿರುವ ತ್ಯಾಜ್ಯ ಹತ್ತಿರದ ನಿವಾಸಿಗಳಿಗೆ ಸಮಸ್ಯೆಯಾಗಿರುವ ಬಗ್ಗೆ ಸ್ವಾತಿ ಎಸ್‌.ಪ್ರಭು ಪ್ರಸ್ತಾವಿಸಿ ಕ್ರಮ ಜರಗಿಸಬೇಕಾಗಿ ಆಗ್ರಹಿಸಿದರು.

ಜಪಾನ್‌ ತಂತ್ರಜ್ಞಾನದ ಎಸ್‌ಟಿಪಿ ಘಟಕ
ಸ್ವತಃ ಬಿಲ್ಡರ್‌ ಆಗಿರುವ ಸದಸ್ಯ ಪಿ.ಕೆ. ಥಾಮಸ್‌ ಅವರು ಅಲಂಗಾರ್‌ನಲ್ಲಿರುವ ತನ್ನ ನೂತನ ಕಟ್ಟಡಕ್ಕೆ ಜಪಾನ್‌ ತಂತ್ರಜ್ಞಾನದ ಎಸ್‌ಟಿಪಿ ಘಟಕ ಅಳವಡಿಸಿದ್ದೇನೆ, ಆದರೆ ಅದು ಸ್ವಲ್ಪ ದುಬಾರಿ ಆದ ಕಾರಣ ಅದನ್ನು ಹಾಕಿಸಲು ಕಟ್ಟಡಗಳ ಮಾಲಕರು ಹಿಂದೇಟು ಹಾಕುತ್ತಿರಬಹುದು ಎಂದರು.

ಮಾರುಕಟ್ಟೆಯ ಮೂಲೆಯಲ್ಲಿರುವ ಗುಜರಿ ಸಾಮಾನು, ಇತರ ತ್ಯಾಜ್ಯ ನಿವಾರಿಸಬೇಕು ಎಂದು ರಾಜೇಶ್‌ ನಾೖಕ್‌ ಆಗ್ರಹಿಸಿದರು.

ಗಾಂಧಿನಗರದಲ್ಲಿ ರಸ್ತೆ ಪಕ್ಕ ಸರಕಾರಿ ಜಾಗದಲ್ಲಿ ನಿರ್ಮಿಸಲಾದ ಖಾಸಗಿ ಟಾಯ್ಲೆಟ್‌ ತೆಗೆಸಿ ಎಂದು ದಿವ್ಯಾ ಜಗದೀಶ್‌ ಹೇಳಿದರು.

Advertisement

ಒಳಚರಂಡಿ
ಒಳಚರಂಡಿ ಯೋಜನೆಯ ಸಂಸ್ಕರಣ ಘಟಕ ಸ್ಥಾಪನೆಗಾಗಿ ಜಾಗ ಖರೀದಿಯ ವಿಷಯದಲ್ಲಿ ಮೊದಲಿನ ಪ್ರಸ್ತಾವ ಕೋರ್ಟಿಗೆ ಹೋಗಿದ್ದು, ನಗರದ ಪಶ್ಚಿಮ ಭಾಗದಲ್ಲಿರುವ ಜಾಗದ ಬಗ್ಗೆ ಎರಡನೇ ಪ್ರಸ್ತಾವ ಮಂಡಳಿಗೆ ಹೋಗಿದೆ ಎಂದು ಎಂಜಿನಿಯರ್‌ ಪದ್ಮನಾಭ ತಿಳಿಸಿದರು. ಈ ಯೋಜನೆಗೆ ಸಂಬಂಧಿಸಿ ಹತ್ತು ವರ್ಷಗಳಿಂದ ಮಂಡಳಿಗೆ ಸಂದಾಯವಾಗಿದೆ ಎನ್ನಲಾದ ಮೊತ್ತದ ಬಗ್ಗೆ ಸುರೇಶ್‌ ಕೋಟ್ಯಾನ್‌ ಪ್ರಸ್ತಾವಿಸಿದಾಗ, ಈ ಬಗ್ಗೆ ನಿಖರವಾಗಿ ಪರಿಶೀಲಿಸುವುದಾಗಿ ಪದ್ಮನಾಭ ಉತ್ತರಿಸಿದರು.

ಸ್ವರಾಜ್ಯ ಮೈದಾನದ ಪಶ್ಚಿಮ ಭಾಗದಲ್ಲಿರುವ ಪುಟ್ಟ ಪಾರ್ಕ್‌ಗೆ ಗುರುಸ್ವಾಮಿ ರಮೇಶ್‌ ಶಾಂತಿಯವರ ಹೆಸರಿಡಲು ತನ್ನ ವಿನಂತಿಯ ಮೇರೆಗೆ ಆಗಿರುವ ನಿರ್ಣಯ ಎಲ್ಲಿ ತನಕ ಬಂದಿದೆ ಎಂದು ವಿಚಾರಿಸಿದರು. ಸಿಮೆಂಟ್‌ನಲ್ಲಿ ರಚಿಸಲಾಗುವ ಈ ನಾಮಫಲಕವನ್ನು ತಾನು ಪ್ರಾಯೋಜಿಸುವುದಾಗಿ ಗಾಂಧಿನಗರ ವಾರ್ಡ್‌ ಸದಸ್ಯೆ ದಿವ್ಯಾ ಜಗದೀಶ್‌ ತಿಳಿಸಿದರು.

ಸುರೇಶ್‌ ಪ್ರಭು ಮಾತನಾಡಿ, ಮಹಾವೀರ ಕಾಲೇಜು ರಸ್ತೆ ನಾಮಫಲಕವನ್ನು ಮೆಸ್ಕಾಂ ಬಳಿ ಅಳವಡಿಸಲು ನಿರ್ಣಯಿಸಿ ಎರಡು ವರ್ಷಗಳೇ ಸಂದಿವೆ, ಕೂಡಲೇ ಹಾಕಿಸಿ ಎಂದು ಸುರೇಶ್‌ ಪ್ರಭು, ನಗರದ ಸ್ವಾಗತ ಕಮಾನುಗಳಿಗೆ ಮತ್ತೆ ಪೈಂಟ್‌ ಬಳಿಯಬೇಕು, ಹಳೆಯ ಮತ್ತು ಹೊಸ ದಾರಿದೀಪ ಕಂಬಗಳಿಗೆ ಮತ್ತೆ ವಾರ್ಡ್‌/ಸಂಖ್ಯೆ ನಮೂದಿಸಬೇಕು ಎಂದು ಶ್ವೇತಾ ಪ್ರವೀಣ್‌ ಸಹಿತ ಸದಸ್ಯರು ವಿನಂತಿಸಿದರು.

ನಮ್ಮವರೇ ಸಪೋರ್ಟ್‌
ಅನಾರೋಗ್ಯಕರ ವಾತಾವರಣದಲ್ಲಿ ಕಲುಷಿತ ಖಾದ್ಯತೈಲ ಬಳಸಿ ಪಾನಿಪೂರಿ ಮತ್ತಿತರ ತಿಂಡಿತಿನಿಸು ತಯಾರಿ, ರಸ್ತೆ ರಸ್ತೆಗಳ ಬದಿಯಲ್ಲಿ, ಪಾರ್ಕಿಂಗ್‌ ಜಾಗದಲ್ಲಿ ಕೆಲವು ಹಿತಾಸಕ್ತಿಗಳ ಬೆಂಬಲದಲ್ಲಿ ನಡೆಯುತ್ತಿರುವ ವ್ಯಾಪಾರ ನಿಲ್ಲಿಸಿ ಎಂದು ಕೊರಗಪ್ಪ, ಪುರಂದರ ದೇವಾಡಿಗ, ಕರಿಂ, ಸುರೇಶ್‌ ಕೋಟ್ಯಾನ್‌ ಮತ್ತಿತರರು ಆಗ್ರಹಿಸಿದರು. ಕಂದಾಯ ನಿರೀಕ್ಷಕ ಅಶೋಕ ಮಾತನಾಡಿ, ನಮ್ಮವರೇ ಸಪೋರ್ಟ್‌ ಮಾಡಿದರೆ ಏನು ಮಾಡಲಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ರೂಪಾ ಶೆಟ್ಟಿ, ರಾಜೇಶ ಮಲ್ಯ, ಸೌಮ್ಯ ಶೆಟ್ಟಿ, ಶಕುಂತಳಾ ದೇವಾಡಿಗ, ಮಮತಾ ಆನಂದ, ಗಿರೀಶ್‌ ಕೋಟೆಬಾಗಿಲು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಉಪಾಧ್ಯಕ್ಷೆ ಸುಜಾತಾ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪ್ರ.ದ. ಸಹಾಯಕಿ ಮೀನಾಕ್ಷಿ, ಸಿಬಂದಿ ಉಪಸ್ಥಿತರಿದ್ದರು.

ಸಭೆಯಲ್ಲಿ ಉದಯವಾಣಿ ವರದಿ ಪ್ರಸ್ತಾವ
ಸದಸ್ಯ ಕೊರಗಪ್ಪ ಮಾತನಾಡಿ, ಮೂಡುಬಿದಿರೆ ಸ್ವತ್ಛ ಸುಂದರ ನಗರ, ಇಲ್ಲಿ ತ್ಯಾಜ್ಯ ವಿಲೇವಾರಿ ಸೂಕ್ತವಾಗಿ ಆಗುತ್ತಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಪತ್ರಿಕೆಗಳಲ್ಲಿ ಕಸ, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲದ ಬಗ್ಗೆ ಸಚಿತ್ರ ವರದಿಗಳು ಪ್ರಕಟವಾಗುತ್ತಿವೆಯಲ್ಲ ಎಂದು ಉದಯವಾಣಿಯನ್ನು ಉಲ್ಲೇಖೀಸಿದರು.

ಚರಂಡಿ ಮೇಲೆ ವ್ಯಾಪಾರ: ಪಾದಚಾರಿಗಳಿಗೆ ಸಮಸ್ಯೆ
ಚರಂಡಿಯ ಮೇಲೆ ಅಂಗಡಿ ಮಾಲಕರು ತಮ್ಮ ಸಾಮಾಗ್ರಿಗಳನ್ನು ರಾಶಿ ಹಾಕುವುದರಿಂದ ಪಾದಚಾರಿಗಳ ನಡಿಗೆಗೆ ತೊಡಕಾಗುತ್ತಿರುವ ಬಗ್ಗೆ ರಾಜೇಶ್‌ ನಾೖಕ್‌ ಪ್ರಸ್ತಾವಿಸಿ, ಪೂರಕವಾಗಿ ಉದಯವಾಣಿಯಲ್ಲಿ ಜ. 6ರಂದು ಪ್ರಕಟವಾಗಿರುವ ವರದಿಯನ್ನು ಉಲ್ಲೇಖೀಸಿ, ಜನರಿಗೆ, ವಿಶೇಷವಾಗಿ, ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ ಎಂದರು. ಇಂಥ ಅಂಗಡಿಗಳ ಮಾಲಕರನ್ನು ಒಂದೊಮ್ಮೆ ವಿಚಾರಿಸಿದರೂ ತನಗೇ ಬೆದರಿಕೆ ಹಾಕುವ ಹೊರರಾಜ್ಯಗಳ ವ್ಯಾಪಾರಿಗಳಿದ್ದಾರೆ ಎಂದು ಕಂದಾಯ ನಿರೀಕ್ಷಕ ಅಶೋಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next