Advertisement

ಮೂಡುಬಿದಿರೆ: ಫುಟ್‌ಪಾತ್‌ಗಿಲ್ಲ ಅವಕಾಶ…ಪಾದಚಾರಿಗಳಿಗೆ ಸಂಕಷ್ಟ

10:14 PM Jan 05, 2023 | Team Udayavani |

ಮೂಡುಬಿದಿರೆ: ಪುರಸಭೆಯ ವ್ಯಾಪ್ತಿಯಲ್ಲಿ ಅದರಲ್ಲೂ ಪೇಟೆ ಪರಿಸರದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳೂ ಸಹಿ ತ ಇತರ ರಸ್ತೆಗಳ ಪಕ್ಕ ಪಾದಚಾರಿಗಳು ಓಡಾಡಲು ಪ್ರತ್ಯೇಕ ಫ‌ುಟ್‌ಪಾತ್‌ ಇಲ್ಲದಿರುವ ಕಾರಣ ಚರಂಡಿಯನ್ನೇ ಫ‌ುಟ್‌ಪಾತ್‌ ಎಂದು ಪರಿಗಣಿಸಿ ಹೆಜ್ಜೆಹಾಕಿದರೆ ಅಕ್ಷರಶಃ ಅಡಿಗಡಿಗೂ ಅಡ್ಡಿ ಆತಂಕಗಳ ಸರಮಾಲೆಯೇ ಗೋಚರಿಸುತ್ತಿದೆ.

Advertisement

ಪೇಟೆಯಿಂದ ಏಕಮುಖವಾಗಿ ಆಳ್ವಾಸ್‌ ಆಸ್ಪತ್ರೆ ರಸ್ತೆಯಲ್ಲಿ ಸಾಗಿ ಬಂದರೆ ಎರಡೂ ಕಡೆ ಚರಂಡಿಯಲ್ಲಿ ಅಲ್ಲಲ್ಲಿ ರಾಜಸ್ಥಾನಿ ಮಾತ್ರವಲ್ಲ ಲೋಕಲ್‌ ಮಂದಿಯೂ ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ಚರಂಡಿಯ ಮೇಲೆಯೇ ರಾಶಿ ಹಾಕಿ ಪಾದಚಾರಿಗಳನ್ನು ಭರ್ರನೆ ಓಡಾಡುವ ವಾಹನಗಳ ಅಪಾಯಕ್ಕೆ ಸಿಲುಕಿಸಿಟ್ಟಂತಿದೆ.

ಕಲ್ಸಂಕ ಕಡೆಯಿಂದ ಪೇಟೆಗೆ ಬರುವ ಹಾದಿಯಲ್ಲಿ ಎಡಕ್ಕೆ ಇರುವ ಚರಂಡಿಯ ಮೇಲೆ ಸಿಮೆಂಟ್‌ ಹಾಕಿ ಮೆಟ್ಟಲು ಕಟ್ಟಿ ಪೈಂಟ್‌ ಮಾಡಲಾಗಿದೆ. ಬಲಕ್ಕೆ ಚರಂಡಿ ಮೇಲೆ ಹಾಲು, ತರಕಾರಿ, ಸೀಯಾಳ ಕೊಚ್ಚುವ ಬೊಡ್ಡೆ, ಕ್ಯಾಂಟೀನ್‌ ಬೋರ್ಡು ಎಲ್ಲವೂ ಅಡ್ಡಡ್ಡ ಇವೆ. ಚರಂಡಿ ಮೇಲೆ ಮೆಟ್ಟಲು ಕಟ್ಟಲಾಗಿದೆ. ಶಾಲೆ ಕಾಲೇಜು ಬಿಡುವ ವೇಳೆ ವಿದ್ಯಾರ್ಥಿಗಳು ಮಾರ್ಗದಲ್ಲಿ ಓಡಾಡುವ ವಾಹನಗಳು ಮೈಮೇಲೆ ಬರುತ್ತವೆಯೋ ಎಂದು ಹೆದರಿಕೊಂಡೇ ಸಾಗಬೇಕಾಗಿದೆ. ಬಹಳ ಅಪಾಯಕಾರಿ.

ಹಳೆ ಪೊಲೀಸ್‌ ಠಾಣೆಯ ಬಳಿ ಬಲಕ್ಕೆ ಒಂದು ಮನೆಯ ಜಗಲಿ ಬಂದಿದೆ, ಮುಂದೆ ಹೆಜ್ಜೆ ಹಾಕಿದಾಗ ಪಾಳು ಬಿದ್ದ ಮನೆಯ ಅವಶೇಷ ಚರಂಡಿ ಮೇಲೆಯೇ ಇದೆ.
ವಿಜಯನಗರದಲ್ಲಿ ರಸ್ತೆ ಬದಿಯ ಚರಂಡಿ ಮೇಲೆಯೇ ವಾಹನ, ವ್ಯಾಪಾರದ ಸರಕು ಇರಿಸಲಾಗಿದೆ. ಮಸೀದಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಚರಂಡಿಯೇ ಇಲ್ಲ, ಅಲ್ಲಿ ನಡೆದು ಕೊಂಡುಹೋಗಲು ತ್ರಾಸವೋ ತ್ರಾಸ ವಾಗುತ್ತಿದೆ.

ಕೃಷ್ಣ ಕಟ್ಟೆಯಿಂದ ಮಸೀದಿಯತ್ತ ಮತ್ತು ಮೇಲ್ಗ ಡೆ ಸಾಗುವ ರಸ್ತೆಯ ಬದಿಯ ಚರಂಡಿಯಲ್ಲಿ ದೂಡುಗಾಡಿಗಳು, ಆಂಗಡಿ ಸಾಮಗ್ರಿಗಳು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಇಷ್ಟು ವೆಚ್ಚದಲ್ಲಿ ರಸ್ತೆಯನ್ನು ಅಗಲ ಮಾಡಿದ್ದು ಇದಕ್ಕೇ ಯೇ ಎಂದು ಜನರಾಡಿಕೊಳ್ಳುವಂತಾಗಿದೆ.

Advertisement

ಬಸ್‌ನಿಲ್ದಾಣದ ನಿರ್ಗಮನ ಹಾದಿಯಲ್ಲಿ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ನಿರ್ಮಿಸಿ ಚರಂಡಿಯ ಮೇಲೆ ನಡೆದಾಡ ದಂತಾಗಿದೆ, ಮುಂದುವರಿದು ಎಡಕ್ಕೆ ತಿರುಗಿ ಮಸೀದಿ ರಸ್ತೆಗಿಳಿದರೆ ಅಲ್ಲೂ ಇದೇ ರೀತಿ ಮಹಡಿಗೆ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ವೆಲ್ಡ್‌ ಮಾಡಲಾಗಿದೆ.

ಚರಂಡಿ ಮೇಲೆಯೇ ಅಂಗಡಿ ಸಾಮಗ್ರಿ
ಹಳೆ ಮಾರುಕಟ್ಟೆ ಇರುವಲ್ಲಿ ಉತ್ತರದ ಬದಿಯಲ್ಲಿ ವಾಹನಗಳು ಝಂಡಾ ಹೂಡಿ ನಡೆದುಕೊಂಡು ಹೋಗುವವರಿಗೆ ತೊಂದರೆಯಾಗುತ್ತಿದೆ. ಉಸಿರುಕಟ್ಟುವ ವಾತಾವರಣವಿಲ್ಲಿದೆ. ಇದರ ಎದುರುಬದಿಯಲ್ಲಿ ಚರಂಡಿ ಮೇಲೆಯೇ ಅಂಗಡಿ ಸಾಮಗ್ರಿ ರಾಶಿ ಬಿದ್ದಿದೆ.

ಅತಿಕ್ರಮಣ ತೆರವಿಗೆ ಕ್ರಮ
ಚರಂಡಿ ಕಬಳಿಸಿ ವ್ಯವಹಾರ ನಡೆಸಲಾಗುತ್ತಿರುವುದನ್ನು ತೆರವು ಮಾಡಿಸಲು ಸೂಕ್ತ ಕ್ರಮ ಜರಗಿಸಲಾಗುವುದು. ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ನಡೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗುವುದು. ಚರಂಡಿಗಳ ಮೇಲಿನ ಅಕ್ರಮ ನಿರ್ಮಾಣಗಳ ಬಗ್ಗೆಯೂ ಕ್ರಮಜರಗಿಸಲಾಗುವುದು.
– ಪ್ರಸಾದ್‌ ಕುಮಾರ್‌, ಪುರಸಭೆ, ಅಧ್ಯಕ್ಷರು, ಮೂಡುಬಿದಿರೆ

– ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next