ಮೂಡುಬಿದಿರೆ: ಕಡಲಕೆರೆಯಲ್ಲಿ ಡಿ. 24ರಂದು ನಡೆಯಲಿರುವ 20ನೇ ವರ್ಷದ ಕೋಟಿ-ಚೆನ್ನಯ ಕಂಬಳಕ್ಕೆ “ಕಾಂತಾರ’ ಖ್ಯಾತಿಯ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರ ತಂಡದವರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಸಚಿವ ಸಿ.ಟಿ.ರವಿ ಕಂಬಳಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ, ಮೂಡುಬಿದಿರೆಯಲ್ಲಿ ಡಿ.21ರಿಂದ ವಾರಕಾಲ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ದೇಶ ವಿದೇಶಗಳ ಆಗಮಿಸಲಿರುವ ಸಹಸ್ರಾರು ವಿದ್ಯಾರ್ಥಿಗಳೂ ಕಂಬಳ ವೀಕ್ಷಣೆ ಮಾಡಲಿದ್ದು ಕಂಬಳವನ್ನು ವಿಶ್ವದ ಮಾತಾಗಿಸುವ ಸಂದರ್ಭ ಒದಗಿ ಬರಲಿದೆ.
ಪ್ರವಾಸಿ ಕೇಂದ್ರ ಮೂಡುಬಿದಿರೆಯಲ್ಲಿ ಭಾರೀ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದರು.
ಒಂಟಿಕಟ್ಟೆ ಕಡಲಕೆರೆ ಬಳಿಯ ಸೃಷ್ಟಿ ಗಾರ್ಡನ್ ಸಭಾಂಗಣದಲ್ಲಿ ಮಂಗಳವಾರ ಸಾಯಂಕಾಲ ನಡೆದ ಮೂಡುಬಿದಿರೆ ಕಂಬಳ ಸಮಿತಿಯ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಸಾಧಕರನ್ನು ಗೌರವಿಸಲು ನಿರ್ಧರಿಸಲಾಗಿದ್ದು ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು, ಜನರು ಬರುವುದರಿಂದ ಸ್ವಯಂ ಸೇವಕರು, ಕಂಬಳ ಪ್ರೇಮಿಗಳು ಸಹಕರಿಸಬೇಕಾಗಿ ಅವರು ಕೋರಿದರು.
Related Articles
ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ್ ಕಡಂಬ ಅವರು ಕಂಬಳ ಸಮಿತಿಗಿದ್ದ 10 ಎಕ್ರೆಯಲ್ಲಿ 1.5 ಎಕ್ರೆ ಹೊರಗಿದೆ, ಅದನ್ನು ಮತ್ತೆ ಸಮಿತಿಗೆ ಸೇರಿಸಿ, ಮ್ಯೂಸಿಯಂ, ಇತರ ಅಭಿವೃದ್ಧಿ ಚಟುವಟಿಕೆಗಳಾಗಬೇಕಾಗಿವೆ ಎಂದರು.
ಕೋಶಾಧಿಕಾರಿ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ, ಕೋಣಗಳನ್ನು ಕಟ್ಟಲು ಕರೆಯ ಬಳಿಯೇ ಸೂಕ್ತ ಜಾಗವನ್ನು ಕಾಯ್ದಿರಿಸಿ, ವಿಳಂಬವಾಗುವುದನ್ನು ತಪ್ಪಿಸುವ, ಸಭಾಕಲಾಪಗಳನ್ನು ಚುಟುಕಿನಲ್ಲಿ ಮುಗಿಸುವ ಬಗ್ಗೆ ಸಲಹೆ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅವರು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ, ಶೂನ್ಯ ತ್ಯಾಜ್ಯ ಕಂಬಳ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಸಮಿತಿಯ ಪ್ರಮುಖರಾದ ಸುನಿಲ್ ಆಳ್ವ, ಈಶ್ವರ್ ಕಟೀಲ್, ಕೆ.ಆರ್ ಪಂಡಿತ್, ಮೇಘನಾದ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಕೆ.ಪಿ ಸುಚರಿತ ಶೆಟ್ಟಿ, ಧನಕೀರ್ತಿ ಬಲಿಪ , ಪುರಸಭೆ, ಗ್ರಾ.ಪಂ. ಪ್ರಮುಖರು ಉಪಸ್ಥಿತರಿದ್ದರು.