ಕಾರ್ಕಳ : ಪೂರ್ವದಲ್ಲಿ ಊರು, ಗ್ರಾಮ, ಮಾಗಣೆಗಳಲ್ಲಿ ಕಂಬಳದ ಕೋಲ ನಡೆದುಕೊಂಡು ಬರುವುದು ಪ್ರತೀತಿ. ತುಳುನಾಡಿನ ನೆಲದ ಸಂಸ್ಕೃತಿ, ಆಚಾರ- ವಿಚಾರ ಪದ್ಧತಿಯಲ್ಲಿ ಇದು ಅಡಕವಾಗಿದೆ. ಕಂಬಳವೆನ್ನುವುದು ಭೂತಾರಾಧನೆಗೆ ಸಂಬಂಧಿಸಿದ ಭಾಗವಾಗಿದೆ ಎಂದು ಮಿಯ್ನಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಹೇಳಿದರು.
ಕಾರ್ಕಳದ ಮಿಯ್ನಾರುವಿನಲ್ಲಿ ರವಿವಾರ ಲವ-ಕುಶ ಜೋಡುಕರೆ ರಾಜ್ಯಮಟ್ಟದ ಕಂಬಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಲೋಕಸೃಷ್ಟಿಯ ಈ ತುಳುನಾಡು ದಶಾವತಾರದ ಕೊನೆಯ ಅವತಾರ ತಾಳಿದ ಪರಶುರಾಮನ ಸೃಷ್ಟಿಯ ನಾಡೆಂದು ಕರೆಯಲಾಗುತ್ತದೆ. ನಾಗಾರಾಧನೆ, ಭೂತಾರಾಧನೆ ನೆಲದ ಸತ್ವದ ಆಚಾರವಾಗಿದ್ದರೆ, ಸರ್ವ ಧರ್ಮೀಯ ಸಂಸ್ಕೃತಿ- ಆಚಾರಗಳು ಇಲ್ಲಿ ನೆಲೆಯಾಗಿವೆ. ಸರ್ವಧರ್ಮ ಸಮಾನತೆಗೆ ಕಂಬಳ ಕ್ರೀಡೆ ಉತ್ತೇಜನ ನೀಡಿದೆ ಎಂದರು.
ಇಂಧನ ಸಚಿವ ವಿ. ಸುನಿಲ್ ಕುಮಾರ್ ಕಂಬಳ ಉದ್ಘಾಟಿಸಿದರು. ಜಿಲ್ಲಾ ಕ್ರೀಡಾ ಇಲಾಖೆ ಕ್ರೀಡಾಧಿಕಾರಿ ರೋಶನ್ ಶೆಟ್ಟಿ ಮಾತನಾಡಿ, ಕಂಬಳ ಕ್ರೀಡಾಕೂಟವನ್ನು ಗ್ರಾಮೀಣ ಕ್ರೀಡಾಕೂಟವಾಗಿ ಸರಕಾರ ಘೋಷಿಸಿದೆ. ಮುಂದಿನ ವರ್ಷದಿಂದ ತಾಲೂಕು, ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಕಂಬಳ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು.
ಮಿಯ್ನಾರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್‌ದಾಸ್ ಅಡ್ಯಂತಾಯ, ಗ್ರಾ.ಪಂ. ಅಧ್ಯಕ್ಷ ಗಿರೀಶ್ ಅಮೀನ್, ಜಿ.ಪಂ. ಮಾಜಿ ಸದಸ್ಯ ಉದಯ್ ಎಸ್. ಕೋಟ್ಯಾನ್, ಭಾಸ್ಕರ್ ಎಸ್. ಕೋಟ್ಯಾನ್, ಮಿಯ್ನಾರು ಮಸೀದಿ ಅಧ್ಯಕ್ಷ ಶಬೀರ್, ಅರುಣ್ ಪೂಜಾರಿ, ಕಂಬಳ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು. ಕೆ. ಗುಣಪಾಲ ಕಡಂಬ ನಿರ್ವಹಿಸಿದರು.