ಮೂಡುಬಿದಿರೆ: ನೂರಾ ಹದಿನಾರು ವರ್ಷಗಳಿಗೂ ಮಿಗಿಲಾದ ಇತಿಹಾಸವುಳ್ಳ ಪ್ರವಾಸಿ ಮಂದಿರ, ಪ್ರವಾಸಿ ಬಂಗ್ಲೆ. ಲಾಲಿ ಬಂಗಲೆ ಎಂದೇ ಹೆಸರಾದ ಮೂಡುಬಿದಿರೆಯ ತನಿಖಾಧಿಕಾರಿಗಳ ತಂಗುದಾಣವೇ ಇದೀಗ “ತನಿಖೆ’ಗೆ ಒಳಪಡುವ ಹಂತದಲ್ಲಿದೆ.
ಈಗೊಂದು ವಾರದಿಂದ ಗಮನಿಸಿದರೆ, ಈ ಲಾಲಿ ಬಂಗಲೆಯ ಪ್ರವೇಶ ದ್ವಾರದಿಂದ ತೊಡಗಿ ಶತಮಾನ ಕಂಡ ಕಟ್ಟಡದವರೆಗಿನ ಹಾದಿ ದೀಪಗಳಾಗಲೀ ಕಟ್ಟಡದ ಮುಖಭಾಗದಲ್ಲಿ ಪಿಡಬ್ಲ್ಯುಡಿ ಬಂಗಲೆ ಎಂದು ಬರೆಯಲಾದ ಫಲಕದ ಮೇಲಿನ ಡೂಂ ಲೈಟ್ ಉರಿಯುತ್ತಿಲ್ಲ. ಕರೆಂಟು ತೆಗೆದಿದ್ದಾರಂತೆ ಎಂಬ ಸುದ್ದಿ ಕಳೆದೊಂದು ವಾರದಿಂದ ಊರಲ್ಲಿ ಹಬ್ಬಿದೆ. ಹಾಗಾಗಿ ಹತ್ತಿರ ಹೋಗಿ ಪರಿಶೀಲಿಸಿದರೆ… ಮೇಲ್ನೋಟಕ್ಕೆ ಕಂಡದ್ದಿಷ್ಟು
*ಮುಖಚಾವಡಿಯಲ್ಲಿದ್ದ ಕನಿಷ್ಠ 2 ಸಿಸಿ ಕೆಮರಾಗಳು ಈಗ ಕಾಣಿಸುತ್ತಿಲ್ಲ.
* 8 ಟ್ಯೂಬ್‌ಲೈಟುಗಳು ಕಾಣಿಸುತ್ತಿಲ್ಲ.
*ಫ್ಯಾನುಗಳು ಮಾಯವಾಗಿವೆ.
*ಒಳಗಿನ ಹಜಾರದಲ್ಲಿದ್ದ ಸುಮಾರು ನಾಲ್ಕಡಿ ಅಗಲ, ಹನ್ನೆರಡು ಅಡಿ ಉದ್ದದ ಡೈನಿಂಗ್ ಟೇಬಲ್, ಆದರ ಸುತ್ತ ಇದ್ದ ಕುರ್ಚಿಗಳು ಕಾಣಿಸುತ್ತಿಲ್ಲ.
ತೆರೆದಿದೆ ಮನೆ ಓ ಬಾ……
ಶನಿವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ನೋಡಿದಾಗ, ಈ ಬಂಗಲೆಯ ಬಾಗಿಲು ಮುಕ್ತವಾಗಿ ತೆರೆದುಕೊಂಡಿದ್ದು, ರವಿವಾರ ಹಗಲು, ಸೋಮವಾರ ಹಗಲು ಹೀಗೆ ತೆರೆದೇ ಇತ್ತು. ಪ್ರಾಯಃ ಯಾವುದೇ ಬೆಲೆ ಬಾಳುವ ಸೊತ್ತುಗಳಿಲ್ಲವಲ್ಲ ಎಂದು ಹೀಗೆ “ತೆರೆದಿದೆ ಮನ ಓ ಬಾ……’ ಎಂದು ಹಾಡಿಕೊಳ್ಳುತ್ತಿದೆಯೇನೋ ಈ ಬಂಗಲೆ ಎಂದು ಊಹಿಸಬೇಕಾಗಿದೆ. ಹೀಗಿರುತ್ತ ಇರುವಾಗ ಈ “ತನಿಖಾಧಿಕಾರಿಗಳ ತಂಗುದಾಣ’ದಲ್ಲೇನಾಗಿದೆ, ಏನಾಗುತ್ತಲಿದೆ ಎಂಬುದು ಜನರಿಗೂ ಗೊತ್ತಾಗಬೇಕಾಗಿದೆ.
Related Articles
ಸದ್ಯದ ಸ್ಥಿತಿ ವರದಿ
ರವಾನಿಸಲಾಗಿದೆ ಸದ್ಯದ ಸ್ಥಿತಿ ವರದಿ ರವಾನಿಸಲಾಗಿದೆ ಶತಮಾನದ ಹಿನ್ನೆಲೆಯಿರುವ ಮೂಡುಬಿದಿರೆಯ “ದಿ ಲಾಲಿ ಬಂಗಲೆ’ಯ ಈಗಿನ ಸ್ಥಿತಿಗತಿಗಳ ಬಗ್ಗೆ ಕೆಲವು ದಿನಗಳ ಹಿಂದೆ ಪರಿಶೀಲನೆ ನಡೆಸಿ ವರದಿಯನ್ನು ಮೈಸೂರಿನಲ್ಲಿರುವ ನಮ್ಮ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಕಳುಹಿಸಿಯಾಗಿದೆ. ಇದು ಪ್ರಾಚ್ಯವಸ್ತು ಪ್ರಾಮುಖ್ಯದ ಕಟ್ಟಡವೆಂಬುದರ ಕುರಿತು ಸಂಬಂಧಪಟ್ಟ ಸಮಿತಿಯ ಪ್ರಧಾನ ಕಚೇರಿಯಿಂದ ಬರುವ ತೀರ್ಮಾನದ ನಿರೀಕ್ಷೆಯಲ್ಲಿದ್ದೇವೆ.
-ಧನಲಕ್ಷ್ಮೀ ಅಮ್ಮಾಳ್,
ಪ್ರಾಚ್ಯವಸ್ತು ಇಲಾಖೆಯ ದ.ಕ. ಜಿಲ್ಲಾಧಿಕಾರಿ
ಕೆಡಹಲು ಪ್ರಾಚ್ಯವಸ್ತು ಇಲಾಖೆ ಅನುಮತಿ ಅಗತ್ಯ ಹೊಸದಾಗಿ ಐಬಿ ನಿರ್ಮಿಸಲು 4 ಕೋಟಿ ರೂ. ಮಂಜೂರಾಗಿದ್ದು, ಈಗಿರುವ ಕಟ್ಟಡ ಕೆಡಹಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕೂ ಮುನ್ನ, ಹಳೆಯ ಕಟ್ಟಡವಾದ ಕಾರಣ ಪ್ರಾಚ್ಯವಸ್ತು ಇಲಾಖೆಯ ಅನುವು ಪಡೆದು ಕೊಳ್ಳಬೇಕಾಗಿದೆ. ಈ ಇಲಾಖೆಯಡಿ ಕಾರ್ಯನಿರ್ವಹಿಸುವ “ಸಂಬಂಧಪಟ್ಟ ಸಮಿತಿ’ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದಷ್ಟೇ ಹೇಳಬಲ್ಲೆ.
-ಸಂಜೀವ ಕುಮಾರ್,
ಎಸಿಸ್ಟೆಂಟ್ ಎಂಜಿನಿಯರ್, ಪಿಡಬ್ಲ್ಯುಡಿ, ಮಂಗಳೂರು
ಧನಂಜಯ ಮೂಡುಬಿದಿರೆ