ಕಾಪು: ವಿದ್ಯಾರ್ಥಿ ಜೀವನದ ಯಶಸ್ಸು ಅವರ ಶಿಸ್ತು ಬದ್ಧ ದಿನಚರಿ, ಉತ್ತಮ ಹವ್ಯಾಸ ಮತ್ತು ಸತತ ಪ್ರಯತ್ನದ ಫಲವಾಗಿದೆ. ಉತ್ತಮ ಅಂಕಗಳೊಂದಿಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಕ್ಲೆಮೆಂಟ್ ಮಸ್ಕರೇನ್ಹಸ್ ಹೇಳಿದರು.
ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ 2016-17 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 25 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜಿಗೆ ಉತ್ತಮ ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕ -ಶಿಕ್ಷಕೇತರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಷಿಮ್ ಡೇಸಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಆಲೊ#àನ್ಸ್ ಕೆ. ಆಲ್ವ, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಪ್ರಾಂಶುಪಾಲ ನವೀನ್ ಕೊರೆಯರವರು ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕಿ ಲೀನಾ ಡಿ.ಸಿಲ್ವಾ ವಂದಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಆಲ್ವಿನಾ ಡಿ.ಸೋಜ ಕಾರ್ಯಕ್ರಮ ನಿರೂಪಿಸಿದರು.