Advertisement

ಮುರಿದು ಬೀಳುವ ಆತಂಕದಲ್ಲಿ ಮೂಡುಬಿದಿರೆ ಬಸ್‌ ತಂಗುದಾಣ

11:06 AM Aug 01, 2022 | Team Udayavani |

ಮೂಡುಬಿದಿರೆ: ಲಂಬಕೋನದ ತಿರುವು ಮತ್ತು ಏರು ಹಾದಿಯ ಅಪಾಯ ಸೇರಿದಂತೆ ತೀರಾ ಅವೈಜ್ಞಾನಿಕವಾಗಿ ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಮೂಡುಬಿದಿರೆ ಬಸ್‌ ನಿಲ್ದಾಣಕ್ಕಿನ್ನೂ ಸಂಬಂಧಪಟ್ಟ ಇಲಾಖೆ ಅನುಮೋದನೆ ಲಭಿಸಿಲ್ಲ ಎಂಬ ಸಂಗತಿಯ ಎಡೆಯಲ್ಲಿ ಅಷ್ಟೇ ಅವೈಜ್ಞಾನಿಕವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಕಬ್ಬಿಣದ ಕಂಬಗಳು “ತೊಡೆ, ಕೀಲು’ ಮುರಿದುಕೊಂಡು ಇಡೀ ತಂಗುದಾಣ ನೆಲಕ್ಕಪ್ಪಳಿಸುವ ಮುನ್ನ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ.

Advertisement

ಈ ಹಿಂದೆ ಹಲವಾರು ಬಾರಿ ಈ ತಂಗುದಾಣದಲ್ಲಿ ನಿಂತವರೆಲ್ಲ ಮಳೆ ಗಾಳಿಗೆ ತೊಯ್ದು ತೊಪ್ಪಡಿಯಾಗುವುದನ್ನು, ತಂಗುದಾಣಕ್ಕೆ ಆಧಾರವಾಗಿರುವ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಜೀರ್ಣವಾಗಿ ಹೋಗಿ ಇಡೀ ತಂಗುದಾಣ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿರುವುದನ್ನು ಹೆಚ್ಚಿನ ಮಾಧ್ಯಮಗಳು ಎಚ್ಚರಿಸಿ ಕಾಲ ಎಷ್ಟೋ ಸರಿದಿದೆ. ಕೂಡಲೇ ಸರಿಪಡಿಸಲಾಗುವುದೆಂದು ಪುರಸಭೆ ಕಡೆಯಿಂದ ಸ್ಪಷ್ಟನೆಯೂ ಲಭಿಸಿತ್ತು. ಆದರೆ ಇನ್ನೂ ಏನೂ ಆಗಿಲ್ಲ. ಮಳೆಗಾಲದಲ್ಲಿ ಬೀಸುವ ಗಾಳಿಗೆ ತಂಗುದಾಣವು “ನಾನಿನ್ನು ನಿಂತುಕೊಂಡೇ ಇರಲಾರೆ, …ಮಲಗಲೇ, ಪ್ಲೀಸ್‌ ?’ ಎಂದು ಪಿಸುಗುಟ್ಟುವಂತಿದೆ.

ದುರಸ್ತಿ ಮಾಡಲಾಗುವುದು: ಇಡೀ ಬಸ್‌ ನಿಲ್ದಾಣದ ಸ್ವರೂಪವನ್ನೇ ಬದಲಾಯಿಸುವ ಪ್ರಸ್ತಾಪ ಇತ್ತು. ಅದು ಕಾರ್ಯಗತವಾಗಲು ಕಾಲಾವಕಾಶ ಬೇಕಾಗುವ ಕಾರಣ ಸದ್ಯ ತಂಗುದಾಣ ಇದ್ದಲ್ಲಿಗೇ ದುರಸ್ತಿ ಮಾಡಲು ಟೆಂಡರ್‌ ಕರೆದರೂ ಯಾರೂ ಮುಂದೆ ಬಂದಿರಲಿಲ್ಲ. ಮೂರನೇ ಬಾರಿ ಟೆಂಡರ್‌ ಗೆ ಗುತ್ತಿಗೆದಾರರು ಒದಗಿ ಬಂದರೂ ಕಬ್ಬಿಣದ ದರದಲ್ಲಿ ಏರಿಕೆಯಾದ ಕಾರಣ ಕಾಮಗಾರಿ ಪ್ರಾರಂಭಿಸಲಾಗಿರಲಿಲ್ಲ. ಈಗ ಸ್ವಲ್ಪ ಕಡಿಮೆಯಾಗಿರುವುದರಿಂದ ಇನ್ನು ಹೆಚ್ಚು ವಿಳಂಬವಿಲ್ಲದೆ ದುರಸ್ತಿ ಕಾರ್ಯ ನಡೆಸಲಾಗುವುದು. –ಪ್ರಸಾದ್‌ ಕುಮಾರ್‌, ಪುರಸಭೆ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next