Advertisement

Moodbidri: ನಾಳೆಯಿಂದ “ಸಪ್ತ’ ಮೇಳ ಸಮ್ಮಿಲಿತ “ಆಳ್ವಾಸ್‌ ವಿರಾಸತ್‌’

11:52 PM Dec 12, 2023 | Team Udayavani |

ಮಂಗಳೂರು: ಈ ಬಾರಿ ಸಪ್ತಮೇಳಗಳ ಸಾಮೀಪ್ಯದೊಂದಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸುವ “ಆಳ್ವಾಸ್‌ ವಿರಾಸತ್‌-2023′ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂಡುಬಿದಿರೆಯಲ್ಲಿ ಸರ್ವ ತಯಾರಿ ನಡೆಸಲಾಗಿದ್ದು, ಪ್ರತೀದಿನ ತಲಾ 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Advertisement

ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ನಡೆಯಲಿರುವ ವಿರಾಸತ್‌ ಅನ್ನು ಇತ್ತೀಚೆಗೆ ಹುತಾತ್ಮರಾದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್‌ ಅವರಿಗೆ ಅರ್ಪಣೆ ಮಾಡಲಾಗಿದೆ.

ಡಿ. 14ರಿಂದ 17ರ  ವರೆಗೆ ಸಂಜೆ 5ರಿಂದ ರಾತ್ರಿ 10ರ ವರೆಗೆ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು ಸಾವಿರಕ್ಕೂ ಮಿಕ್ಕಿದ ದೇಶ-ವಿದೇಶದ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ಸಪ್ತ ಮೇಳಗಳಾದ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳು ಜನಮನ ಆಕರ್ಷಿಸಲಿವೆ.

ಡಿ. 14ರಂದು ಸಂಜೆ 5.45ಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ವಿರಾಸತ್‌ ಉದ್ಘಾಟಿಸಲಿದ್ದಾರೆ. ಸಂಜೆ 6.35ಕ್ಕೆ ಭವ್ಯ ಸಾಂಸ್ಕೃತಿಕ ಮೆರವಣಿಗೆ, ಸಾಂಸ್ಕೃತಿಕ ರಥ ಸಂಚಲನ ನಡೆಯಲಿದೆ. ಜಾತಿ, ಭಾಷೆ, ಊರು, ಕಸುಬಿಗೆ ಅನುಗುಣವಾಗಿ ಬಹಳಷ್ಟು ಜಾನಪದ ಕಲೆಗಳಿವೆ. ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡುವ ಆಶಯದಿಂದ ಈ ಬಾರಿಯ ವಿರಾಸತ್‌ ಮೆರವಣಿಗೆಯಲ್ಲಿ ನೂರಕ್ಕೂ ಮಿಕ್ಕಿದ ಕಲಾತಂಡಗಳು ಬರ ಲಿವೆ. 4 ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ.

ಡಿ. 15ರಂದು ಸಂಜೆ 6ರಿಂದ 8ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕ ಬೆನ್ನಿ ದಯಾಲ್‌ ಅವರಿಂದ “ಗಾನ ವೈಭವ’, ಡಿ. 16ರಂದು ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಅವರಿಂದ “ಭಾವ ಲಹರಿ’, ಡಿ. 17ರಂದು ಸಂಜೆ 5.15ಕ್ಕೆ ನಡೆಯುವ ಸಮಾರಂಭದಲ್ಲಿ ಆಳ್ವಾಸ್‌ ವಿರಾಸತ್‌-2023 ಪ್ರಶಸ್ತಿ ಪ್ರದಾನ ನಡೆಯಲಿದೆ.

Advertisement

ಈ ಬಾರಿ ಖ್ಯಾತ ವಯಲಿನ್‌ ವಾದಕ ಡಾ| ಮೈಸೂರು ಮಂಜುನಾಥ್‌, ಜನಪ್ರಿಯ ಬಾನ್ಸುರಿ ಮಾಂತ್ರಿಕ ಡಾ| ಪ್ರವೀಣ್‌ ಗೋಡ್ಖಿಂಡಿ ಹಾಗೂ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಂಸ್ಕೃತಿಕ “ರಥ’ ಸಂಚಲನ-ರಥಾರತಿ
ಡಿ. 14ರ ಉದ್ಘಾಟನೆ ಬಳಿಕ ರಾತ್ರಿ 8.05ರಿಂದ 9ರ ವರೆಗೆ ಸಾಂಸ್ಕೃತಿಕ ರಥ ಸಂಚಲನವಿರಲಿದೆ. ಲೋಕ ಪೂಜಿತ ಶ್ರೀ ರಾಮ ಹಾಗೂ ಶ್ರೀಕೃಷ್ಣನ ವಿಗ್ರಹಗಳನ್ನು ಇಟ್ಟು ಸಾಂಸ್ಕೃತಿಕ ರಥ ಸಂಚಲನ ವಿರಾಸತ್‌ನ ಈ ಬಾರಿಯ ವಿಶೇಷ. ಮುಂಭಾಗ ದಲ್ಲಿ ವಿಘ್ನ ನಿವಾರಕ ವಿನಾಯಕನ ರಥವು ಸಾಗಲಿದೆ. ಜತೆಗೆ ಶ್ರೀ ಲಕ್ಷ್ಮೀ, ಸರಸ್ವತಿ ಹಾಗೂ ಹನುಮಂತನ ವಿಗ್ರಹಗಳಿರುವ 3 ಪಲ್ಲಕ್ಕಿಗಳು ಇರಲಿವೆ.

ಪಂಢರಾಪುರ, ಮೈಸೂರು ಹಾಗೂ ಹರೇರಾಮ ಹರೇಕೃಷ್ಣ ತಂಡದ ಭಜಕರಿಂದ ಭಜನೆ ನಡೆಯಲಿದೆ. ವೇದಿಕೆ ಸಮೀಪ ಬರುವಾಗ ಅದಕ್ಕೆ ರಥಾರತಿ ಆಗಲಿದೆ. ಅದಕ್ಕಾಗಿ ಹರಿದ್ವಾರದಿಂದ ಪ್ರಮುಖರು ಆಗಮಿಸಲಿದ್ದಾರೆ. ವೇದಿಕೆಯ ಬಲ ಭಾಗದಿಂದ ರಥ ಹೊರಟು ವೇದಿಕೆಯ ಎಡಭಾಗಕ್ಕೆ ತೆರಳಲಿದೆ. ವಿರಾಸತ್‌ನ ಕೊನೆಯ ದಿನ ಅದನ್ನು ಮತ್ತೆ ವಾಪಸ್‌ ಬಲ ಬದಿಗೆ ತಂದು ನಿಲ್ಲಿಸಲಾಗುತ್ತದೆ ಎಂದು ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಸಪ್ತ ಮೇಳಗಳು
– ಕೃಷಿ ಮೇಳ , ಆಹಾರ ಮೇಳ , ಫಲಪುಷ್ಪ ಮೇಳ, ಕರಕುಶಲ-ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ , ಛಾಯಾಚಿತ್ರಗಳ ಪ್ರದರ್ಶನ

 

Advertisement

Udayavani is now on Telegram. Click here to join our channel and stay updated with the latest news.

Next