ಬೀದರ: ಸ್ಮಾರಕಗಳು ಒಂದು ನಾಡಿನ ಐತಿಹಾಸಿಕ ಕನ್ನಡಿಯಿದ್ದಂತೆ. ಹಿಂದಿನ ಅರಸರು ಏನು ಮಾಡಿದ್ದಾರೋ ಅದನ್ನೇ ಆಯಾ ಭಾಗದ ಸ್ಮಾರಕಗಳು ನಮಗೆ ಇತಿಹಾಸ ತಿಳಿಸಿಕೊಡುತ್ತವೆ. ಆದ್ದರಿಂದ ಸ್ಮಾರಕಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಹಂಪಿ ಕನ್ನಡ
ವಿಶ್ವವಿದ್ಯಾಲಯದ ಉಪ ಕುಲಸಚಿವ ಪ್ರೊ| ಎಸ್.ವೈ. ಸೋಮಶೇಖರ ಹೇಳಿದರು.
ನಗರದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಇತಿಹಾಸ ಅಧ್ಯಯನ ವಿಭಾಗ ಹಾಗೂ ಯುಜಿಸಿ ಸಿಪಿಇ 3ನೇ ಹಂತದ ಯೋಜನೆಯಡಿ ನಡೆದ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಕಿರೀಟ ಬೀದರ ಜಿಲ್ಲೆ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದ ಜಿಲ್ಲೆಯಾಗಿದೆ. ಇಲ್ಲಿ ಶರಣರು, ಸಂತರು ಮಹಾತ್ಮರು ಜೀವನ ಸಾಗಿಸಿದ್ದಾರೆ. ಜೊತೆಗೆ ಐತಿಹಾಸಿಕ ಕೋಟೆ, ಮದರಸಾ ಹಾಗೂ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡ ಐತಿಹಾಸಿಕ ಕ್ಷೇತ್ರ ಬೀದರ
ಆಗಿದೆ. ವೈಜ್ಞಾನಿಕ ಆಧಾರದ ಮೇಲೆ ರೂಪುಗೊಂಡ ಇಲ್ಲಿನ ಕೋಟೆಯ ಒಳಗಿನ ಒಂದೊಂದು ಕಲ್ಲುಗಳು ಸಹ ಒಂದೊಂದು ಇತಿಹಾಸ ಹೇಳುತ್ತವೆ.
ಬೀದರನಿಂದ ಚಾಮರಾಜನಗರ ವರೆಗೆ ನಮ್ಮ ನಾಡು ಇತಿಹಾಸ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ, ಸ್ಮಾರಕಗಳು ಮತ್ತು ವಾಸ್ತುಶಿಲ್ಪಗಳು ಹೆಜ್ಜೆ ಹೆಜ್ಜೆಗೂ ನಾಡಿನ ಚರಿತ್ರೆಯನ್ನು ಎತ್ತಿ ತೋರಿಸುತ್ತವೆ. ವಿದ್ಯಾರ್ಥಿಗಳು ಇತಿಹಾಸ ಅಧ್ಯಯನ ಮಾಡಬೇಕು. ಇತಿಹಾಸ ಕುರಿತು ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸದಾ ಪರಸ್ಪರ ಚರ್ಚಿಸುತ್ತಾ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎಸ್. ಪಾಟೀಲ ಮಾತನಾಡಿ, ಕಲಾ ವಿಭಾಗ ನಮಗೆ ಜಗತ್ತಿನ ಜ್ಞಾನ ನೀಡುತ್ತದೆ. ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು ಜೀವನದಲ್ಲಿ ಉಪನ್ಯಾಸದ ಅನುಭವ ಬಳಸಿಕೊಳ್ಳಬೇಕು ಎಂದರು.
ಪ್ರೊ|ರಾಜೇಂದ್ರ ಬಿರಾದಾರ, ಪ್ರೊ|ವೈಜಿನಾಥ ಚಿಕ್ಕಬಸೆ, ಡಾ|ಜಗನ್ನಾಥ ಹೆಬ್ಟಾಳೆ, ಲಕ್ಷ್ಮೀ ಕುಂಬಾರ, ಡಾ|ಮಹಾನಂದ ಮಡಕಿ ಇದ್ದರು.