Advertisement

ಮಳೆಗಾಲ: ಕಂಟ್ರೋಲ್‌ ರೂಂ ತೆರೆಯಲು ಉಡುಪಿ ಡಿಸಿ ಸೂಚನೆ

12:43 PM May 23, 2018 | Karthik A |

ಉಡುಪಿ: ಮಳೆಗಾಲದ ಸಂದರ್ಭ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು 24 ಗಂಟೆಯೂ ನೆರವಿಗೆ ಬರುವ ತುರ್ತು ಕಂಟ್ರೋಲ್‌ ರೂಂ ತೆರೆಯುವುದು ಸಹಿತ ಎಲ್ಲ ಮುಂಜಾಗರೂಕತೆ ಕ್ರಮಗಳು ಹಾಗೂ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮೇ 22ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಅವರು ಸೂಚನೆಗಳನ್ನು ನೀಡಿದರು. ಎಲ್ಲ ತಾಲೂಕುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಟ್ರೋಲ್‌ ರೂಂ ತೆರೆಯಬೇಕು, ಮುಳುಗು ತಜ್ಞರು ಸಹಿತ ಎಲ್ಲ ಅಗತ್ಯ ಸಿಬಂದಿ ಸನ್ನದ್ಧರಾಗಿರಬೇಕು. ನೆರೆ ಬರುವ ಪ್ರದೇಶಗಳಲ್ಲಿ ದೋಣಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಅಧಿಕಾರಿಗಳು ಮೊಬೈಲನ್ನು ಯಾವುದೇ ಕಾರಣಕ್ಕೂ ಸ್ವಿಚ್‌ ಆಫ್ ಮಾಡ ಬಾರದು ಎಂದರು.

ಪರಿಹಾರ ಶೀಘ್ರ ಬಿಡುಗಡೆ ಕ್ರಮ
ಮಳೆಯಿಂದ ಜೀವ ಹಾನಿ, ಆಸ್ತಿ ಹಾನಿ ಹಾಗೂ ಜಾನುವಾರು ಹಾನಿ ಸಂಭವಿಸಿದರೆ ಪರಿಹಾರ ನೀಡಲು ಶೀಘ್ರ ವರದಿ ತಯಾರಿಸಿ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು, ರಸ್ತೆ ಬದಿಗಳಲ್ಲಿ ಮಣ್ಣು ಕುಸಿತ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ತೆರೆದ ಚರಂಡಿ ಹಾಗೂ ಲೈಸನ್ಸ್‌ ಮುಗಿದ ಕಲ್ಲು ಕೋರೆಗಳಿಗೆ ಸೂಕ್ತ ಬೇಲಿ, ಎಚ್ಚರಿಕೆ ಫ‌ಲಕಗಳನ್ನು ಅಳವಡಿಸಬೇಕು ಎಂದು ಗ್ರಾ.ಪಂ., ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಸೂಚಿ ಸಿದರು.

ಮೆಸ್ಕಾಂ, ಅಗ್ನಿಶಾಮಕ
ಮೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯವರು ಕೂಡ ಸಿದ್ಧರಾಗಿರಬೇಕು, ಸಮುದ್ರ ಕೊರೆತ ತಡೆ ಕಾಮಗಾರಿ ಶೀಘ್ರ ಮುಗಿಸಬೇಕು. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ತಂಡಕ್ಕೆ ಪ್ರಥಮ ಚಿಕಿತ್ಸಾ ಕಿಟ್‌, ರಾತ್ರಿ ವೇಳೆ ಕಾರ್ಯ ನಿರ್ವಹಿಸಲು ಟಾರ್ಚ್‌ಲೈಟು ಸೇರಿದಂತೆ ಎಲ್ಲ ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

Advertisement

ಸಭೆಯಲ್ಲಿ ಕುಂದಾಪುರ ಎಸಿ ಭೂ ಬಾಲನ್‌, ಅಪರ ಜಿಲ್ಲಾಧಿಕಾರಿ ಅನುರಾಧಾ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಸುರಕ್ಷೆ
ಶಾಲೆಗಳನ್ನು ದುರಸ್ತಿ ಮಾಡಿಸ ಬೇಕು, ಹಾದಿಯಲ್ಲಿ ಗುಂಡಿಗಳಿದ್ದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಶಾಲಾ ವಾಹನ ಚಾಲಕರಿಗೆ ಸುರಕ್ಷಿತವಾಗಿ ಮಕ್ಕಳನ್ನು ಶಾಲೆಗೆ ತಲುಪಿಸುವಂತೆ ಸೂಚನೆ ನೀಡ ಬೇಕು. ಭಾರೀ ಮಳೆ ಇದ್ದರೆ ಜಿಲ್ಲಾಡಳಿತದ ಅನುಮತಿ ಪಡೆದು ರಜೆ ನೀಡಬೇಕು. ಶಾಲೆ ಪ್ರಾರಂಭಕ್ಕೆ ಮುನ್ನ ಶಾಲಾ ಮಕ್ಕಳ ಸುರಕ್ಷತಾ ಸಭೆ ನಡೆಸಿ ವರದಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next