Advertisement

ಇಂದಿನಿಂದ ಸದನ ಸಮರ: ಕೈ-ಕಮಲ ಜಗಳದಲ್ಲಿ ದೂರ ನಿಲ್ಲಲಿದೆಯೇ ಜೆಡಿಎಸ್‌?

10:11 PM Sep 11, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ 10 ದಿನಗಳ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳ “ಹಗರಣ’ ಆರೋಪ-ಪ್ರತ್ಯಾರೋಪಗಳಿಗೆ ಉಭಯ ಸದನಗಳು ಸಾಕ್ಷಿಯಾಗಲಿವೆ.

Advertisement

ನಿಗದಿಯಂತೆ ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಕಲಾಪ ಆರಂಭಗೊಳ್ಳಲಿದ್ದು, ಅರಣ್ಯ ಸಚಿವರಾಗಿದ್ದ ಹಾಗೂ ವಿಧಾನಸಭೆಯ ಹಿರಿಯ ಸದಸ್ಯರಾಗಿದ್ದ ಉಮೇಶ್‌ ಕತ್ತಿಯವರ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಮೊದಲ ದಿನದ ಕಲಾಪ ಸಂತಾಪಕ್ಕೆ ಸೀಮಿತವಾಗಲಿದೆ.

ಮಂಗಳವಾರದಿಂದ ಅಧಿಕೃತ ಕಾರ್ಯಕಲಾಪಗಳು ನಡೆಯಲಿವೆ.ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸೆಂಟ್‌ ಕಮಿಷನ್‌, ಬೆಂಗಳೂರು ಮಳೆ-ಪ್ರವಾಹ, ರಾಜ್ಯದಲ್ಲಿನ ಪ್ರವಾಹ ಇತ್ಯಾದಿ ವಿಷಯಗಳು ಸದ್ದು ಮಾಡುವ ಸಾಧ್ಯತೆಯಿದ್ದು, ಶನಿವಾರ ನಡೆದ ಜನಸ್ಪಂದನೆ ಸಮಾವೇಶದಲ್ಲಿ ಅರ್ಕಾವತಿ “ರೀಡು’ ಹಗರಣ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದಲ್ಲಿನ ಹಗರಣಗಳನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು “ಸದನ ಕದನ’ದ ಮುನ್ಸೂಚನೆ ಕೊಟ್ಟಂತಾಗಿದೆ.

ಸಾಮಾನ್ಯವಾಗಿ ವಿಧಾನಮಂಡಲದ ಅಧಿವೇಶನವೆಂದರೆ ಆಡಳಿತ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಪ್ರತಿಪಕ್ಷಗಳಿಗೆ ಇರುವ ಪ್ರಮುಖ ಅಸ್ತ್ರ ಹಾಗೂ ಶಾಸನಾತ್ಮಕ ವೇದಿಕೆ. ಸಹಜವಾಗಿ ಆಡಳಿತ ಪಕ್ಷದ ವೈಫ‌ಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸವಾರಿ ಮಾಡಲು ಪ್ರತಿಪಕ್ಷಗಳು ತಮ್ಮದೇ ಆದ ತಂತ್ರಗಳನ್ನು ಹೆಣೆದಿದ್ದರೆ, ಅವುಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ದಾಖಲೆಗಳ “ಗುರಾಣಿ’ ಸಿದ್ಧಪಡಿಸಿಕೊಂಡಿದೆ. 10 ದಿನಗಳ ಈ ಅಧಿವೇಶನದಲ್ಲಿ ಆರೋಪ-ಪ್ರತ್ಯಾರೋಪ, ಗದ್ದಲ, ಧರಣಿ, ಸಭಾತ್ಯಾಗ, ಸುಗಮ ಕಲಾಪಕ್ಕೆ ಸ್ಪೀಕರ್‌ ಹಾಗೂ ಸಭಾಪತಿಗಳಿಂದ ಸಂಧಾನದ ಪ್ರಹಸನಗಳು ನಡೆಯುವುದರಲ್ಲಿ ಅನುಮಾನಗಳಿಲ್ಲ.

ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸೆಂಟ್‌ ಕಮಿಷನ್‌, ಬೆಂಗಳೂರು ಮಳೆ- ಪ್ರವಾಹ, ರಾಜ್ಯದ ಪ್ರವಾಹ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದ್ದರೆ, ಪ್ರತಿಪಕ್ಷಗಳ ಆರೋಪಗಳಿಗೆ ದಾಖಲೆ ಸಮೇತ ತಿರುಗೇಟು ನೀಡುವುದರ ಜೊತೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದ ಅರ್ಕಾವತಿ ಹಗರಣ, ಪಾವಗಡ ಸೋಲಾರ್‌ ಘಟಕ ಸ್ಥಾಪನೆಯಲ್ಲಿ ನಡೆದ ಅವ್ಯವಹಾರ, ದಿಂಬು-ಹಾಸಿಗೆ ಹಗರಣ ಮತ್ತಿತರ ಪ್ರಕರಣಗಳನ್ನು ಮರು ತನಿಖೆಗೆ ವಹಿಸಲು ಬಿಜೆಪಿ ಪ್ರತಿತಂತ್ರ ಹೆಣೆದಿದ್ದು, ಆ ಮೂಲಕ ಪ್ರತಿಪಕ್ಷವನ್ನು ಕಟ್ಟಿ ಹಾಕಲು ಸನ್ನದ್ದವಾಗಿದೆ. ವಿಶೇಷವಾಗಿ ಅರ್ಕಾವತಿ ಡಿನೋಟಿಫಿಕೇಷನ್‌ ಹಾಗೂ ಪಾವಗಡ ಸೋಲಾರ್‌ ವಿದ್ಯುತ್‌ ಘಟಕ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರಿಬ್ಬರ ಬಾಯಿ ಮುಚ್ಚಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.

Advertisement

ಎಸಿಬಿ ಕೆಸರೆರಚಾಟ ಸಾಧ್ಯತೆ:
ಸಿದ್ದರಾಮಯ್ಯ ಸರ್ಕಾರದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ರಚನೆಯನ್ನು ರದ್ದುಪಡಿಸಿ ಹೈಕೋರ್ಟ್‌ ನೀಡಿರುವ ಆದೇಶ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ. ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಇನ್ನಷ್ಟು ಬಲ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು ಅನುಷ್ಠಾನಕ್ಕೆ ತರಲು ಬಿಜೆಪಿ ಆಗಿಲ್ಲ. ಹೈಕೋರ್ಟ್‌ ಎಸಿಬಿಯನ್ನು ರದ್ದುಪಡಿಸಿತು ಎಂಬ ತಿರುಗೇಟು ಕಾಂಗ್ರೆಸ್‌ ಬಳಿ ಇದೆ. ಒಟ್ಟಿನಲ್ಲಿ ಎಸಿಬಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕೆಸರೇರಚಾಟ ನಡೆಯುವ ಸಾಧ್ಯತೆಯೂ ಇದೆ.

ಜೆಡಿಎಸ್‌ ನಡೆ ಏನಿರಲಿದೆ:
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರಿನ ಮಳೆ ಅನಾಹುತ, ರಾಜ್ಯದ ಪ್ರವಾಹ ಪರಿಸ್ಥಿತಿ ಇತ್ಯಾದಿ ವಿಷಯಗಳು ಅಧಿವೇಶನದಲ್ಲಿ ಜೆಡಿಎಸ್‌ ಅಸ್ತ್ರಗಳಾಗಿವೆ. ಎಲ್ಲಾ ವಿಚಾರಗಳನ್ನು ಸದನದಲ್ಲಿ ಮಾತನಾಡುತ್ತೇನೆ ಎಂದು ಇತ್ತಿಚಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಡುವಿನ ಕಚ್ಚಾಟಗಳ ಅಷ್ಟೊಂದು ಪ್ರತಿಕ್ರಿಯೆ ನೀಡದ ಕುಮಾರಸ್ವಾಮಿ ಒಂದಿಷ್ಟು ಅಂತರ ಕಾಯ್ದುಕೊಂಡಂತಿದೆ. ಹಾಗಾಗಿ, ಅಧಿವೇಶನದಲ್ಲಿ ಜೆಡಿಎಸ್‌ ನಡೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

ಸಂಭಾವ್ಯ ಚರ್ಚಾ ವಿಷಯಗಳು
ಪ್ರವಾಹ, ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸಂಟ್‌ ಕಮಿಷನ್‌, ಉಪನ್ಯಾಸಕರ ನೇಮಕಾತಿ ಹಗರಣ, ರಾಜ್ಯದ ಕಾನೂನು ಸುವ್ಯವಸ್ಥೆ, ಬಿಬಿಎಂಪಿ ಹಾಗೂ ತಾ.ಪಂ. ಜಿ.ಪಂ ಚುನಾವಣೆ, ಲೋಕಾಯುಕ್ತ ಬಲಪಡಿಸುವಿಕೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಸಿದ್ದರಾಮೋತ್ಸವ, ಬಿಜೆಪಿಯ ಜನಸ್ಪಂದನಾ ಸಮಾವೇಶ, ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ, ಜೆಡಿಎಸ್‌ನ ಜಲಧಾರೆ, ಸಚಿವ-ಶಾಸಕರ ವಿರುದ್ಧದ ಆರೋಪಗಳು

ಏಳು ವಿಧೇಯಕಗಳ ಮಂಡನೆ?
ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳಿಗೆ ಜನಸಂಖ್ಯೆ ನಿಗದಿಗೆ ಸಂಬಂಧಿಸಿದ “ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಆಧ್ಯಾದೇಶ-2022′ ಸೇರಿದಂತೆ ಏಳಕ್ಕೂ ಹೆಚ್ಚು ವಿಧೇಯಕಗಳು ಅಧಿವೇಶನದಲ್ಲಿ ಮಂಡಣೆಯಾಗಲಿವೆ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next