Advertisement

ಮುಂಗಾರು ಹಂಗಾಮು: ಶೇ.36 ಮಳೆ ಕೊರತೆ: ಕೃಷಿ ಸಚಿವ

09:37 PM Jul 17, 2023 | Team Udayavani |

ವಿಧಾನಪರಿಷತ್ತು: ರಾಜ್ಯದಲ್ಲಿ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಶೇ.36 ಮಳೆ ಕೊರತೆಯಾಗಿದ್ದು, ಶೇ.33 ಬಿತ್ತನೆಯಾಗಿದೆ. ಬರಗಾಲ ಘೋಷಿಸುವ ಸಂಬಂಧ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ ಮಾನದಂಡಗಳ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ.

Advertisement

ನಿಯಮ 72ರಡಿ ಬಿಜೆಪಿಯ ಹೇಮಲತಾ ನಾಯಕ್‌ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಕೃಷಿ ಸಚಿವರು, ರಾಜ್ಯದಲ್ಲಿ ಮುಂಗಾರು 10 ದಿನ ತಡವಾಗಿ ಆರಂಭವಾಗಿದೆ. ಶೇ. 36 ರಷ್ಟು ಮಳೆ ಕೊರತೆಯಾಗಿದೆ. ಕಳೆದ ಬಾರಿಗಿಂತ ಶೇ.10 ಕಡಿಮೆ ಬಿತ್ತನೆ ಕಾರ್ಯ ನಡೆದಿದ್ದು, ಕೃಷಿ ಚಟುವಟಿಕೆ ಉತ್ತೇಜನಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ರಾಜ್ಯಾದ್ಯಂತ ನೈರುತ್ಯ ಮುಂಗಾರು ಮಳೆಯು ಈ ತಿಂಗಳ 7ರಂತೆ ವಾಡಿಕೆ ಮಳೆ 257 ಮಿಮೀ ಗೆ ಪ್ರತಿಯಾಗಿ, 166 ಮಿಮೀ ಮಳೆಯಾಗಿದ್ದು, ಶೇ. 36 ಕೊರತೆಯಾಗಿರುತ್ತದೆ. ಉತ್ತರ ಕರ್ನಾಟಕದ ಜಿಲ್ಲೆ ಗಳಾದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಹಾಗೂ ಯಾದಗಿರಿಯಲ್ಲಿ ಜುಲೈ 7ರಂತೆ ವಾಡಿಕೆ ಮಳೆ 124 ಮಿಮೀ ಗೆ ಪ್ರತಿಯಾಗಿ, 76 ಮಿಮೀ ಮಳೆಯಾಗಿದ್ದು, ಶೇ.39 ಕೊರತೆಯಾದೆ ಎಂದು ಮಾಹಿತಿ ನೀಡಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಿವಿಧ ಕೃಷಿ ಬೆಳೆಗಳನ್ನು 82.35 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ, ಬಿತ್ತನೆ ಕೈಗೊಳ್ಳುವ ಗುರಿ ಹಮ್ಮಿಕೊಳ್ಳಲಾಗಿದೆ. ಆದರೆ, ಜುಲೈ 7 ರಂತೆ 26.82 ಲಕ್ಷ ಹೆಕ್ಟೇರ್‌ (ಶೇ.33)ಗಳಲ್ಲಷ್ಟೇ ಬಿತ್ತನೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಹಂಗಾಮಿಗೆ ಸುಮಾರು 37.67 ಲಕ್ಷ ಹೆಕ್ಟೇರ್‌ರಷ್ಟು ಮಳೆಯಾಶ್ರಿತ ಹಾಗೂ 18.54 ಲಕ್ಷ ಹೆಕ್ಟೇರ್‌ರಷ್ಟು, ನೀರಾವರಿ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗುತ್ತದೆ. ಈ ಮುಂಗಾರು ಹಂಗಾಮಿಗೆ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 56.20 ಲಕ್ಷ ಹೆಕ್ಟೇರ್‌ರಷ್ಟು ಬಿತ್ತನೆ ಗುರಿ ಇದ್ದು, ಈವರೆಗೆ 20.60 ಲಕ್ಷ ಹೆಕ್ಟೇರ್‌ (ಶೇ.36) ರಷ್ಟರಲ್ಲಿ ಬಿತ್ತನೆಯಾಗಿದೆ. ಈ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಸುಕಿನ ಜೋಳ, ತೊಗರಿ, ಹತ್ತಿ, ಕಬ್ಬು, ಹೆಸರು, ಉದ್ದು, ಭತ್ತ, ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಳನ್ನು ಬೆಳೆಯಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಬರ ಘೋಷಣೆ: ಮಾನದಂಡಗಳಂತೆ ಕ್ರಮ
ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯೇ ಆಗಿಲ್ಲ. ತಕ್ಷಣ ಬರ ಘೋಷಣೆಗೆ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿಯ ಶಶೀಲ್‌ ನಮೋಶಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವರು, ಈ ಸಂಬಂಧ 15 ದಿನಗಳ ಹಿಂದೆ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ. ಸಮಿತಿಯು ಈಗಾಗಲೇ ಒಂದು ಸಭೆ ಮಾಡಿದೆ. ವಾರದಲ್ಲಿ ಮತ್ತೂಂದು ಸಭೆ ನಡೆಸಲಿದೆ. ಈ ತಿಂಗಳ ಆರಂಭದಿಂದ ಚೆನ್ನಾಗಿ ಮಳೆ ಬೀಳುತ್ತಿತ್ತು. ಆದರೆ, 4 ದಿನಗಳಿಂದ ಮಳೆ ನಿಂತಿದೆ. ಮತ್ತೂಂದು ಸಭೆ ಮಾಡಿ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ವಸತಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ
ವಿಧಾನಪರಿಷತ್ತು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳನ್ನು ಹಣಕಾಸಿನ ಲಭ್ಯತೆ ಆಧಾರದಲ್ಲಿ ಹಂತ-ಹಂತವಾಗಿ ಉನ್ನತೀಕರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ. ಸದನದಲ್ಲಿ ಬೆಳಗಾವಿ ಜಿಲ್ಲೆಯ ವಸತಿ ಶಾಲೆಗಳ ಉನ್ನತೀಕರಣದ ಬಗ್ಗೆ ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ವಸತಿ ಶಿಕ್ಷಣ ಸಂಘದ (ಕ್ರೈಸ್‌) ಅಧೀನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಸೇರಿದಂತೆ 742 ವಸತಿ ಶಾಲೆಗಳಿವೆ. ಒಂದು ಶಾಲೆಯ ಉನ್ನತೀಕರಣಕ್ಕೆ ಕನಿಷ್ಠ 10 ಕೋಟಿ ರೂ. ಬೇಕು. ಅದರಂತೆ 742 ಶಾಲೆಗಳಿಗೆ 7 ಸಾವಿರ ಕೋಟಿ ರೂ. ಬೇಕು. ಈ ಶಾಲೆಗಳನ್ನು ಉನ್ನತೀಕರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದ್ದು, ಅನುದಾನದ ಲಭ್ಯತೆಗೆ ಅನುಸಾರವಾಗಿ ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುವುದು ಎಂದರು.

ಈ ವೇಳೆ ಬೆಳಗಾವಿ ಜಿಲ್ಲೆಗೆ ಸೀಮಿತವಾಗಿ ಮಾತನಾಡಿದ ಪ್ರಕಾಶ್‌ ಹುಕ್ಕೇರಿ, ಜಿಲ್ಲೆಯಲ್ಲಿ 54 ವಸತಿ ಶಾಲೆಗಳಿವೆ. 3 ಮಾತ್ರ ಉನ್ನತೀಕರಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 2,700 ಮಕ್ಕಳು ಎಸ್ಸೆಸ್ಸೆಲ್ಸಿ ಪಾಸ್‌ ಆಗುತ್ತಾರೆ. ಅದರಲ್ಲಿ 380 ಜನ ಮಕ್ಕಳಿಗೆ ಮಾತ್ರ ಪಿಯುಸಿ ಪ್ರವೇಶ ಸಿಗುತ್ತದೆ. ಉಳಿದ 2,300 ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು. ಆರ್ಥಿಕ ಹೊರೆ ಆಗುವುದಿಲ್ಲ. ಈಗಾಗಲೇ ಶಾಲೆಗಳು, ಮೂಲಸೌಕರ್ಯಗಳು ಎಲ್ಲವೂ ಇದೆ. ಪಿಯುಸಿ ತರಗತಿಗಳು ಆರಂಭಿಸಿದರೆ ಸಾಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ರಾಜ್ಯದ ವಸತಿ ಶಾಲೆಗಳು ಯಾವ ಸಿಬಿಎಸ್‌ಇಗಿಂತ ಕಡಿಮೆ ಇಲ್ಲ. ಈ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವೂ ಇದೆ. ಹಾಗಾಗಿ, ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಇದೇ ವೇಳೆ ಸರ್ಕಾರದ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next