Advertisement

ಕರಾವಳಿಯಲ್ಲಿ ಆರಂಭವಾಯಿತು ನಾಟಿ ಕಾರ್ಯ

06:05 AM Jun 12, 2018 | Team Udayavani |

ಕೋಟ:  ಮುಂಗಾರು ಬಿರುಸುಗೊಳ್ಳುತ್ತಿದ್ದಂತೆ  ಕರಾವಳಿಯಲ್ಲಿ ರೈತನ ಕೃಷಿ ಚಟುವಟಿಕೆ ಕೂಡ ವೇಗ ಪಡೆದಿದೆ. ಸಾಕಷ್ಟು ಮುಂಚಿತವಾಗಿ ನೇಜಿ ತಯಾರಿಸಿದ ರೈತರು ಹಲವು ಕಡೆಗಳಲ್ಲಿ ಇದೀಗ ನಾಟಿ ಆರಂಭಿಸಿದ್ದಾರೆ.

Advertisement

ಅಂತೆಯೇ ಕೋಟ ಹೋಬಳಿಯ ಹಲವು ಕಡೆಗಳಲ್ಲಿ ಶನಿವಾರದಿಂದ ನಾಟಿ ಆರಂಭಗೊಂಡಿದ್ದು  ಆಧುನಿಕ ಯಂತ್ರೋಪಕರಣಗಳ ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯಾದ ಕೋಣದ ಮೂಲಕ ಉಳುಮೆ, ಕಾರ್ಮಿಕರ ಮೂಲಕ ನಾಟಿ ನಡೆಯುತ್ತಿದ್ದು ನೋಡುಗರಿಗೆ  ಖುಷಿಕೊಡುತ್ತಿದೆ.

ನೇಜಿ ಕೊರತೆ 
ಬಿಟ್ಟು ಬಿಡದೆ  ಸುರಿದ ಭಾರೀ ಮಳೆಯಿಂದಾಗಿ ಹಲವು  ಕಡೆಗಳಲ್ಲಿ ನೇಜಿಗೆ ಬಿತ್ತಿದ್ದ ಬೀಜ ಕೊಳೆತು ನಾಶವಾಗಿದೆ. ಹೀಗಾಗಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ನೇಜಿ ಕೊರತೆ ಎದುರಾಗುವ ಲಕ್ಷಣವಿದೆ. ಇದಕ್ಕಾಗಿ ಕೆಲವು ರೈತರು ನಾಟಿ ಮಾಡುವುದನ್ನೇ ಕೈಬಿಟ್ಟು  ಬಿತ್ತನೆಯಲ್ಲಿ ತೊಡಗಿದ್ದಾರೆ. 

ಎಂ.ಒ.4.  ಕೊರತೆ: ಬದಲಿ ತಳಿ ಪ್ರಯೋಗ ಈ ಬಾರಿ ಮುಂಗಾರು ಹಂಗಾಮಿಗೆ ಕರಾವಳಿಯ ಸಾಂಪ್ರದಾಯಿಕ ತಳಿ ಎಂ.ಒ.4. ಬೀಜದ ಕೊರತೆ ಯಾದ ಕಾರಣ ಹಲವು ಮಂದಿ ಪ್ರಯೋಗದ ರೀತಿಯಲ್ಲಿ ಉಮಾ, ಜ್ಯೋತಿ, ಜಯ, ಎನ್‌.13 ಮುಂತಾದ ತಳಿ ಉಪಯೋಗಿಸಿ ನೇಜಿ ತಯಾರಿಸಿದ್ದು  ಈ ತಳಿಗಳು  ಯಾವ ರೀತಿ ಫಸಲು ನೀಡಬಹುದು ಎನ್ನುವ ನಿರೀಕ್ಷೆ ಕೂಡ ರೈತರಲ್ಲಿದೆ.ಒಟ್ಟಾರೆ ಬೀಜದ ಕೊರತೆ, ನೇಜಿ ಸಮಸ್ಯೆ, ಕೂಲಿಯಾಳು ಸಮಸ್ಯೆಗಳನ್ನು ಮೆಟ್ಟಿ ನಿಂತು  ಖುಷಿ- ಖುಷಿಯಲ್ಲಿ  ಗದ್ದೆಯ ಕಡೆ ರೈತ ಹೆಜ್ಜೆಹಾಕಿದ್ದಾನೆ.

ಜಿಲ್ಲೆಯಲ್ಲಿ 44 ಸಾವಿರ ಹೆಕ್ಟೇರ್‌  ಭತ್ತದ ಗುರಿ
ಉಡುಪಿ ತಾಲೂಕಿನಲ್ಲಿ 17,750, ಕುಂದಾಪುರ 18,250, ಕಾರ್ಕಳ 8,000 ಸೇರಿದಂತೆ  ಜಿಲ್ಲೆಯಲ್ಲಿ ಒಟ್ಟು ಈ ಬಾರಿ 44ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ  ಭತ್ತದ ಬೇಸಾಯ ಮಾಡುವ ಗುರಿ ಕೃಷಿ ಇಲಾಖೆಯ ಮುಂದಿದೆ.  ಕಳೆದ ಸಾಲಿನಲ್ಲಿ 42,820 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.

Advertisement

ಬಿತ್ತನೆ ಬೀಜ ವಿತರಣೆ 
ಜಿಲ್ಲೆಯಲ್ಲಿ  44 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ ಅಗತ್ಯವಿರುವ ಬಿತ್ತನೆ ಬೀಜ ಮುಂತಾದವುಗಳನ್ನು ರೈತಸಂಪರ್ಕ ಕೇಂದ್ರದ ಮೂಲಕ ವಿತರಿಸಲಾಗಿದೆ ಜತೆಗೆ ಯಂತ್ರೋಪಕರಣಗಳು ಮುಂತಾದವುಗಳನ್ನು ನೀಡಲಾಗುತ್ತಿದೆ.
– ಡಾ| ಕೆಂಪೇ ಗೌಡ, 
ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next