Advertisement

ಕರಾವಳಿಯಲ್ಲಿ ಮುಂಗಾರು ಬಿರುಸು, ಕೃಷಿ ಕಾರ್ಯಕ್ಕೆ ಚುರುಕು

01:45 AM Jul 02, 2022 | Team Udayavani |

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿರುವಂತೆಯೇ ಕೃಷಿ ಚಟುವಟಿಕೆಗಳು ಕೂಡಾ ಬಿರುಸುಗೊಂಡಿವೆ. ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ವಿತರಣೆಯಾಗಿದ್ದು ನೇಜಿ (ಸಸಿ) ಸಿದ್ಧಗೊಳಿಸುವ ಹಾಗೂ ಈಗಾಗಲೇ ನೇಜಿ ತಯಾರಿಗಿರುವ ಕಡೆಗಳಲ್ಲಿ ನಾಟಿ ಕಾರ್ಯ ಪ್ರಾರಂಭಗೊಂಡಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ 9,435 ಹೆಕ್ಟೇರ್‌ ಭತ್ತದ ಬೆಳೆ ಗುರಿ ಇರಿಸಿಕೊಳ್ಳಲಾಗಿದ್ದು ಈಗಾಗಲೇ 845 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಕಾರ್ಯ ಆಗಿದೆ. ಉಡುಪಿ ಜಿಲ್ಲೆಯಲ್ಲಿ 38,000 ಹೆ.ಗುರಿಯಲ್ಲಿ 557 ಹೆ.ಪ್ರದೇಶದಲ್ಲಿ ನಾಟಿಯಾಗಿದ್ದು ಉಳಿದಂತೆ ನೇಜಿ ಸಿದ್ಧಗೊಳ್ಳುತ್ತಿದೆ.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಎಂಒ-4, ಉಮಾ, ಜ್ಯೋತಿ, ಜಯ ಸೇರಿದಂತೆ 452 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆಯಾಗಿದೆ. 262 ಕ್ವಿಂಟಾಲ್‌ ದಾಸ್ತಾನು ಇದೆ. ರಸಗೊಬ್ಬರವೂ ಗಣನೀಯ ಪ್ರಮಾಣದಲ್ಲಿ ರೈತರಿಗೆ ವಿತರಣೆಯಾಗಿದ್ದು ಹೆಚ್ಚುವರಿ ಬೇಡಿಕೆ ನಿಭಾಯಿಸಲು ಸಾಕಷ್ಟು ಪ್ರಮಾಣದಲ್ಲಿ ಕಾಪು ದಾಸ್ತಾನು ಇರಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರಗೆ 1,504 ಟನ್‌ ಯೂರಿಯಾ, 800 ಟನ್‌ ಎಂಒಪಿ, 152 ಟನ್‌ ಡಿಎಪಿ ವಿತರಣೆಯಾಗಿದೆ. ರೈತರಿಂದ ಬರುವ ಬೇಡಿಕೆ ಪೂರೈಸಲು 2,137 ಟನ್‌ ರಸಗೊಬ್ಬರ ಕಾಪು ದಾಸ್ತಾನು ಇರಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಎಂಒ-4, ಎಂಒ-21, ಜೋತಿ ಸೇರಿದಂತೆ 1,862 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆಯಾಗಿದೆ. 550 ಟನ್‌ ಯೂರಿಯಾ, 595 ಟನ್‌ ಎನ್‌ಪಿಕೆ, 289 ಟನ್‌ ಎಂಒಪಿ, 248 ಟನ್‌ ಡಿಎಪಿ ಸೇರಿದಂತೆ 1,682 ಟನ್‌ ರಸಗೊಬ್ಬರ ರೈತರಿಗೆ ನೀಡಲಾಗಿದೆ.ಇದಲ್ಲದೆ ರೈತರಿಂದ ಬರುವ ಹೆಚ್ಚಿನ ಬೇಡಿಕೆ ಪೂರೈಸಲು 556 ಟನ್‌ ರಸಗೊಬ್ಬರ ಕಾಪು ದಾಸ್ತಾನು ಇರಿಸಿಕೊಳ್ಳಲಾಗಿದೆ.

ಬಿತ್ತನೆ ಬೀಜದಲ್ಲಿ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು ಸಾಮಾನ್ಯ ವರ್ಗಕ್ಕೆ ಕಿಲೋಗೆ 8 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಕಿಲೋಗೆ 12 ರೂ. ಸಹಾಯಧನ ನೀಡಲಾಗುತ್ತಿದೆ.

Advertisement

ತಾಲೂಕುವಾರು ಗುರಿ
ದ.ಕ. ಜಿಲ್ಲೆಯಲ್ಲಿ ಈ ಬಾರಿ ಮಂಗಳೂರು ತಾಲೂಕಿನಲ್ಲಿ 1,500, ಮೂಡುಬಿದಿರೆಯಲ್ಲಿ 1,650, ಮೂಲ್ಕಿಯಲ್ಲಿ 1,700, ಉಳ್ಳಾಲದಲ್ಲಿ 850, ಬಂಟ್ವಾಳದಲ್ಲಿ 1,550, ಬೆಳ್ತಂಗಡಿಯಲ್ಲಿ 1,600, ಪುತ್ತೂರಿನಲ್ಲಿ 191, ಕಡಬದಲ್ಲಿ 159, ಸುಳ್ಯದಲ್ಲಿ 235 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಇರಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ (ಹಿಂದಿನ ತಾಲೂಕು) ಉಡುಪಿ ತಾಲೂಕಿನಲ್ಲಿ 16,500, ಕುಂದಾಪುರ 14,500 ಹಾಗೂ ಕಾರ್ಕಳದಲ್ಲಿ 7,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆ ಗುರಿ ನಿಗದಿಪಡಿಸಲಾಗಿದೆ.

ಪ್ರಗತಿಯಲ್ಲಿದೆ
ಮುಂಗಾರು ಹಂಗಾಮಿನ ಭತ್ತ ಕೃಷಿ ಚುಟುವಟಿಕೆಗಳು ಚುರುಕುಗೊಂಡಿದ್ದು ಸಸಿ ಸಿದ್ಧಗೊಳ್ಳುತ್ತಿದೆ. ಸಸಿ ಸಿದ್ಧಗೊಂಡಿರುವ ಕಡೆಗಳಲ್ಲಿ ನಾಟಿ ಕಾರ್ಯ ನಡೆಯುತ್ತಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಾಗುತ್ತಿದೆೆ.
-ಡಾ| ಸೀತಾ, ಕೃಷಿ ಜಂಟಿ ನಿರ್ದೆಶಕರು ದ.ಕ.ಜಿಲ್ಲೆ
ಡಾ| ಎಚ್‌. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next