ಮುದಗಲ್ಲ: 2020-21ನೇ ಸಾಲಿನ ಮುಂಗಾರು ಬೆಳೆ ಕಟಾವು ಸಮೀಕ್ಷೆಯಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರಿಗೆ ಬರಬೇಕಿದ್ದ ನೆರೆ ಪರಿಹಾರ ಬಾರದಂತಾಗಿದೆ.
ಯಾರದೋ ಜಮೀನಿನಲ್ಲಿ ಮಾಡಬೇಕಾದ ಜಿಪಿಎಸ್ ಸೆರೆ ಹಿಡಿಯುವ ಛಾಯಚಿತ್ರ ಇನ್ನಾರದೋ ಜಮೀನಿನಲ್ಲಿ ಮಾಡಲಾಗಿದೆ. ಅಚ್ಚರಿಯಂದರೆ ತೊಗರಿ ಬೆಳೆದ ಹೊಲದಲ್ಲಿ ಸಜ್ಜೆ ಎಂದು, ಸಜ್ಜೆ ಬೆಳೆದ ಹೊಲದಲ್ಲಿ ಹತ್ತಿ ಎಂದು, ಹತ್ತಿ ಬೆಳೆದ ಹೊಲದಲ್ಲಿ ದಾಳಿಂಬೆ ಎಂದು ಅಧಿಕಾರಿಗಳು ಜಿಪಿಎಸ್ ಮಾಡಿದ್ದರಿಂದ ಸರಕಾರದ ನಯಾಪೈಸೆ ರೈತರಿಗೆ ಸಿಕ್ಕಿಲ್ಲ.
ತಲೇಖಾನ ಗ್ರಾಪಂದಲ್ಲಿ ಜಿಪಿಎಸ್ ಸರಿಯಾಗಿ ಮಾಡದಿರುವುದರಿಂದ ಬೆಳೆ ಪರಿಹಾರವೂ ಸಿಕ್ಕಿಲ್ಲ. ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ನೋಂದಣಿಯಾಗುತ್ತಿಲ್ಲ. ಬೆಂಬಲ ಬೆಲೆಗೆ ತೊಗರಿ ಖರೀದಿ ಮಾಡುವ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣೆಯಲ್ಲಿ ತೊಗರಿ ಎಂದು ನಮೋದಿಸಿಲ್ಲ ಎಂದು ಮರಳಿಸುತ್ತಿದ್ದಾರೆಂದು ಹಡಗಲಿ, ಸೊಂಪೂರ, ಯರದೊಡ್ಡಿ, ದೇಸಾಯಿ ಭೋಗಾಪೂರ, ಹಡಗಲಿ ತಾಂಡಾದ ರೈತರು ಆರೋಪಿಸಿದ್ದಾರೆ.
ಒಂದು ಭಾರಿ ಜಿಪಿಎಸ್ ಸೆರೆ ಹಿಡಿಯುವದರಿಂದ ರೈತರಿಗೆ ಎರಡು ತೊಂದರೆ ಅನುಭವಿಸುವಂತಾಗಿದೆ. ಸತತ ಮಳೆಯಿಂದ ಹೊಲದಲ್ಲಿನ ಫಸಲು ಕಳೆದುಕೊಂಡ ರೈತರು ಸರಕಾರ ಘೋಷಿಸಿದ ಪರಿಹಾರ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯ್ದರು ಉಪಯೋಗವಾಗಿಲ್ಲ. ಇನ್ನು ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಅಧಿಕಾರಿಗಳ ತಪ್ಪಿನಿಂದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಧನ ಜಮೆಯಾಗಿಲ್ಲ. ಕನ್ನಾಳ ಮತ್ತು ಮೆದಕಿನಾಳ ಗ್ರಾಪಂದಲ್ಲಿಯೂ ಜಿಪಿಎಸ್ ತಪ್ಪಾಗಿದೆ ಎಂದು ಅಲ್ಲಿನ ರೈತರು ಆರೋಪಿಸಿದ್ದಾರೆ.
Related Articles
ಬೇರೆ ಗ್ರಾಪಂಗಳಲ್ಲಿ ಬೆಳೆ ಪರಿಹಾರ ಬಂದಿದೆ. ಆದರೆ, ನಾವು ತಿಂಗಳಿಂದ ಪರಿಹಾರ ಹಣಕ್ಕೆ ತಹಶೀಲ್ದಾರ್ ಕಚೇರಿಗೆ ಅಲೆದು ಸಾಕಾಗಿದೆ. ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಈ ಬಗ್ಗೆ ಯಾವ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. -ದೊಡ್ಡನಗೌಡ ಪಾಟೀಲ್, ಹಡಗಲಿ ಗ್ರಾಮದ ರೈತ
ತೊಗರಿ ಬೆಳೆ ಜಿಪಿಎಸ್ ಸೆರೆ ಹಿಡಿಯದ ಅರ್ಜಿಗಳನ್ನು ರೈತರಿಂದ ಸ್ವೀಕರಿಸಲಾಗಿದೆ. ಕೃಷಿ ಇಲಾಖೆಯಿಂದ ಮಹಜರ ವರದಿ ಮಾಡಿ ಪುನಃ ಬೆಳೆ ತಂತ್ರಾಂಶದಲ್ಲಿ ಅಳವಡಿಸಿದ ಬಳಿಕ ತೊಗರಿ ಬೆಳೆದ ರೈತರ ಪಹಣಿಯಲ್ಲಿ ನಮೋದಾಗುತ್ತದೆ. -ಶಿವಶರಣ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ