Advertisement

ಗಣೇಶ ಪ್ರತಿಷ್ಠಾಪನೆಗೆ ಏಕಗವಾಕ್ಷಿ ವ್ಯವಸ್ಥೆ

12:08 PM Sep 09, 2018 | Team Udayavani |

ಬೆಂಗಳೂರು: ಗಣೇಶ ಉತ್ಸವಕ್ಕೆ ನಗರ ಸಜ್ಜಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದು, ನಗರದ ವಿವಿಧೆಡೆ ಗಣೇಶನ ಪ್ರತಿಷ್ಠಾಪನೆಗೆ ಇದೇ ಮೊದಲ ಬಾರಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಮತ್ತೂಂದೆಡೆ ಗಣೇಶನ ಗಾತ್ರ ಐದು ಅಡಿ ದಾಟ ಕೂಡದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಾಗಿ ಸೂಚಿಸಿದೆ. ಈ ಮಧ್ಯೆ ವರ್ಷದಿಂದ ವರ್ಷಕ್ಕೆ ಪರಿಸರ ಸ್ನೇಹಿ ಗಣೇಶನ ಬಗ್ಗೆ ಜಾಗೃತಿಯೂ ಮೂಡುತ್ತಿದೆ.

Advertisement

ಆದರೆ, ಇಷ್ಟು ಸಾಲದು. ಈ ಬಾರಿ ಸಂಪೂರ್ಣ ಪರಿಸರ ಸ್ನೇಹಿ ಗಣೇಶನ ಹಬ್ಬ ಆಚರಣೆಗೆ ಎಲ್ಲರೂ ಪಣತೊಡಬೇಕಿದೆ. ಹಾಗಿದ್ದರೆ, ಪರಿಸರಕ್ಕೆ ಹಾನಿಯಾಗದ ಗಣೇಶೋತ್ಸವ ಆಚರಣೆ ಹೇಗೆ? ಪರಿಸರ ಸ್ನೇಹಿ ಗಣಪನಿಗೆ ಮಾನದಂಡಗಳಾದರೂ ಏನು? ಸ್ಥಳೀಯ ಆಡಳಿತದ ವಿವಿಧ ಇಲಾಖೆಗಳ ಪಾತ್ರಗಳು ಏನು? ಎಂಬ ಹತ್ತಾರು ಪ್ರಶ್ನೆಗಳು ಏಳುವುದು ಸಹಜ. ಅದಕ್ಕೆ  ಉತ್ತರ ಇಲ್ಲಿದೆ.

ಬಿಬಿಎಂಪಿ ಸೂಚನೆ
– ನಗರದ ಯಾವುದೇ ಕೆರೆಗಳಲ್ಲಿ 5 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲ. 
– ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. 
– ರಾತ್ರಿ 10.30ರ ಬಳಿಕ ಗಣೇಶಮೂರ್ತಿ ವಿಸರ್ಜನೆ ಮಾಡುವಂತಿಲ್ಲ. 
– ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾವುದೇ ವಾಹನಗಳನ್ನು ಕೆರೆ ಅಂಗಳಕ್ಕೆ ಅನುಮತಿಸುವುದಿಲ್ಲ. ಜತೆಗೆ ಪಟಾಕಿ ಹಾಗೂ ಧ್ವನಿವರ್ಧಕಗಳು ನಿಷಿದ್ಧ.
– ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೂವಿನ ಹಾರ, ಹಣ್ಣು ಮತ್ತಿತರ ತ್ಯಾಜ್ಯವನ್ನು ಕೆರೆಯಲ್ಲಿ ಹಾಕುವಂತಿಲ್ಲ. ಅಂಗಳದಲ್ಲಿ ಇಟ್ಟಿರುವ ತ್ಯಾಜ್ಯದ ತೊಟ್ಟಿಯಲ್ಲೇ ಹಾಕಬೇಕು.
– ಬಲವಂತವಾಗಿ ವಂತಿಗೆ ವಸೂಲು ಮಾಡುವಂತಿಲ್ಲ. 
– ಚಪ್ಪರ, ಶಾಮಿಯಾನ ಮತ್ತು ವಿಗ್ರಹ ರಕ್ಷಣೆಗೆ ಆಯಾ ಸಂಘ-ಸಂಸ್ಥೆಗಳಿಂದಲೇ ಸ್ವಯಂ ಸೇವಕರ ನೇಮಕ. 
– ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಚಪ್ಪರ ಅಥವಾ ಶಾಮಿಯಾನ ಹಾಕಿ, ಗಣೇಶನ ಪ್ರತಿಷ್ಠಾಪನೆ ಮಾಡುವಂತಿಲ್ಲ.
– ವಿಸರ್ಜನೆ ವೇಳೆ ಪೊಲೀಸರಿಗೆ ಕಡ್ಡಾಯವಾಗಿ ಅನುಮತಿ ಮತ್ತು ಮಾಹಿತಿ ಪಡೆಯಬೇಕು. 
– ಅಗ್ನಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮರಳು, ನೀರಿನ ವ್ಯವಸ್ಥೆ ಮಾಡಿಕೊಂಡಿರಬೇಕು. 

ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ
– ಈ ಬಾರಿ ಬೆಸ್ಕಾಂ, ಬಿಬಿಎಂಪಿ, ಪೊಲೀಸ್‌ ಅನುಮತಿ ಜತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೂ ಅತ್ಯಗತ್ಯ. ಎಲ್ಲವೂ ಏಕಗವಾಕ್ಷಿ ಅಡಿ ದೊರೆಯಲಿವೆ. 
– ಗರಿಷ್ಠ ಒಂದು ತಿಂಗಳವರೆಗೆ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಇದೆ. 
– ಅಕ್ಟೋಬರ್‌ 12 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಸರ್ಜನೆಗೆ ಕೊನೆಯ ದಿನ. 
– ಪಿಒಪಿ ಅಥವಾ ರಾಸಾಯನಿಕ ಬಣ್ಣ ಲೇಪಿತ ಗಣಪತಿ ತಯಾರಿ ಮತ್ತು ಮಾರಾಟ ಕಂಡುಬಂದರೆ, ಸ್ಥಳೀಯ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. 
– ಸ್ಥಳೀಯ ಸಂಸ್ಥೆಗಳು ವಿಸರ್ಜನೆಗೆ ಸೂಚಿಸಿರುವ ಸ್ಥಳಗಳನ್ನು ಹೊರತುಪಡಿಸಿ, ಬೇರೆಲ್ಲೂ ವಿಸರ್ಜನೆ ಮಾಡುವಂತಿಲ್ಲ. 
– ವಿಸರ್ಜನೆಯಾಗದೆ ಉಳಿದ ಕಳೆದ ವರ್ಷದ ಪಿಒಪಿ ಗಣೇಶನ ಮೂರ್ತಿಗಳು ಕಂಡುಬಂದಲ್ಲಿ ವಶಕ್ಕೆ ಪಡೆದು, ಒಣತ್ಯಾಜ್ಯ ನಿರ್ವಹಣಾ ಘಟಕಕ್ಕೆ ವಿಲೇವಾರಿ ಮಾಡಲಾಗುವುದು. 
* ಕೆರೆ, ಬಾವಿ, ಹೊಳೆಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರಿನ ಸೆಲೆ, ಅಂತರ್ಜಲ ಬತ್ತಿಹೋಗುತ್ತವೆ. ಆದ್ದರಿಂದ ಸಂಚಾರಿ ವಿಸರ್ಜನಾ ವಾಹನಗಳಲ್ಲಿ, ಬಕೆಟ್‌ಗಳಲ್ಲಿ ವಿಸರ್ಜಿಸಿ. ರಸ್ತೆ, ಚರಂಡಿಗಳಲ್ಲಿ ಹೂವಿನಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ. ಕಸದ ವಾಹನ ಬಳಸಿ. 
* ಪಟಾಕಿ ಬೇಡ. ಇದರಿಂದ ವಾಯುಮಾಲಿನ್ಯ ಮಾತ್ರವಲ್ಲ; ಕಸ ಕೂಡ ಹರಡುತ್ತದೆ. 

ಪೊಲೀಸ್‌ ಇಲಾಖೆ ಸಿದ್ಧತೆ
* ಆಯಾ ಠಾಣಾ ವ್ಯಾಪ್ತಿಯ ಮೂರ್ತಿ ಪ್ರತಿಷ್ಠಾಪನಾ ಸ್ಥಳಗಳನ್ನು ಸಂಬಂಧಪಟ್ಟ ಠಾಣಾಧಿಕಾರಿಗಳು ಮೊದಲೇ ಪಟ್ಟಿ ಮಾಡಿಕೊಳ್ಳಲು ಸೂಚಿಸಲಾಗಿದೆ. 
* ವಿವಾದಿತ ಹಾಗೂ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. 
* ಹೆಚ್ಚು ಮಂದಿ ಸೇರುವ ಪೆಂಡಾಲ್‌ಗ‌ಳ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.
*ಮೂರ್ತಿ ಮೆರವಣಿಗೆಗೆ ಸೂಕ್ತ ರಸ್ತೆಗಳನ್ನು ಗುರಿತಿಸಿ, ಆ ಮಾರ್ಗದಲ್ಲಿ ಮಾತ್ರ ತೆರಳುವಂತೆ ಸೂಚಿಸಲು ಕ್ರಮ. 
* ಮಸೀದಿ, ಚರ್ಚ್‌ ಸೇರಿ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಈ ಮಾರ್ಗಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಪಟಾಕಿ ಸಿಡಿಸಲು ಅವಕಾಶ ಇಲ್ಲ. 
*ಸ್ಥಳದಲ್ಲಿ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕು. ಜೀವರಕ್ಷಕರು, ಅಗ್ನಿಶಾಮಕ ಸಿಬ್ಬಂದಿ ವ್ಯವಸ್ಥೆಗೆ ಸೂಚಿಸಲಾಗಿದೆ. 
* ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳನ್ನು ಮೊದಲೇ ವಶಕ್ಕೆ ಪಡೆಯಲಾಗುತ್ತಿದೆ. 
* ಶಾಂತಿಯುತ ಹಬ್ಬ ಆಚರಣೆಗಾಗಾಗಿ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ. 

Advertisement

ಬೆಸ್ಕಾಂ ಹೇಳ್ಳೋದೇನು?
ಅನಧಿಕೃತ ಸಂಪರ್ಕ – ಶಿಕ್ಷಾರ್ಹ ಅಪರಾಧ: 
ಗಣೇಶೋತ್ಸವ ಆಚರಣೆಗೆ ತುದಿಗಾಲಲ್ಲಿ ನಿಂತಿರುವ ಸಂಘ-ಸಂಸ್ಥೆಗಳೇ ಹುಷಾರ್‌! ವಿದ್ಯುದ್ದೀಪಾಲಂಕಾರಗಳಿಂದ ಗಣೇಶ ಉತ್ಸವವನ್ನು ಝಗಮಗಿಸುವ ಭರದಲ್ಲಿ ಅನಧಿಕೃತ ವಿದ್ಯುತ್‌ ಲೈನ್‌ ಎಳೆದರೆ, ಮೂರು ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಲಿದ್ದೀರಾ ಎಂದು ಬೆಸ್ಕಾಂ ಎಚ್ಚರಿಸಿದೆ.  

ಅದರಂತೆ ಗಣೇಶೋತ್ಸವಕ್ಕೆ ಬೆಸ್ಕಾಂ ತಂತಿಗಳಿಂದ ವಿದ್ಯುತ್‌ ಕದಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ವಿದ್ಯುತ್‌ ಕಳ್ಳತನ ಆರೋಪದಡಿ ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಸಜೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಯ ಅನುಕೂಲಕ್ಕಾಗಿ ಸಂಘ-ಸಂಸ್ಥೆಗಳ ಅನುಕೂಲಕ್ಕಾಗಿ ಬೆಸ್ಕಾಂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದು,

ಈ ವ್ಯವಸ್ಥೆ ಬೇಕಿದ್ದಲ್ಲಿ ತಮ್ಮ ವ್ಯಾಪ್ತಿಯ ಉಪ ವಿಭಾಗದ ಕಚೇರಿ ಸಂಪರ್ಕಿಸಿ, ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಅನಧಿಕೃತ ಸಂಪರ್ಕಗಳಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಲೋಡ್‌ ಹೆಚ್ಚಾಗುವ/ ಕಿಡಿ ಉಂಟಾಗುವ/ ಬೆಂಕಿ-ಹೊಗೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next