ಸಿದ್ದಾಪುರ: ಕೋವಿಡ್ 19 ಮತ್ತು ಕೆಎಫ್‌ಡಿ ಕಾಯಿಲೆ ಹರಡುವಿಕೆ ಕುರಿತು ಮುನ್ನೆಚ್ಚರಿಕೆ, ಕುಡಿಯುವ ನೀರು, ಮಳೆಗಾಲದ ಪೂರ್ವಸಿದ್ಧತೆ ಕಾರ್ಯಗಳ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಆ ಕುರಿತು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅವರು ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಈವರೆಗೆ 49 ಕೆಎಫ್‌ಡಿ ಪ್ರಕರಣಗಳು ಕಂಡುಬಂದಿದ್ದು ತಲಾ ಎರಡು ರೋಗಿಗಳು ಮಣಿಪಾಲ ಮತ್ತು ಸಿದ್ದಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆ ಉಲ್ಬಣಗೊಳ್ಳುವ ಸ್ಥಿತಿ ಕಂಡುಬರುತ್ತಿಲ್ಲ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಉಣುಗು ನಿಯಂತ್ರಿಸುವ ಚುಚ್ಚುಮದ್ದು ನೀಡಲಾಗಿದೆ. ಎಲ್ಲ ಗ್ರಾಪಂಗಳಲ್ಲೂ ರೋಗ ನಿರೋಧಕ ದ್ರಾವಣ ಸಿಂಪಡಿಸಲಾಗಿದೆ. ಹಿಂದಿನ ವರ್ಷ ಮೃತಪಟ್ಟ 6 ಜನರಿಗೆ ಪರಿಹಾರ ಬಂದಿದ್ದು ಅವರ ವಾರಸುದಾರರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.
ಕೋವಿಡ್ 19 ಕುರಿತಂತೆ ರಾಜ್ಯ, ಕೇಂದ್ರ ಸರಕಾರಗಳು ಕೆಲವು ಅವಶ್ಯಕತೆಗಳಿಗೆ ವಿನಾಯತಿ ನೀಡಲು ಮುಂದಾಗಿದೆ. ಏನೇ ಇದ್ದರೂ ರೋಗದ ಬಗ್ಗೆ ಎಚ್ಚರ ಅಗತ್ಯ. ಲಾಕ್‌ಡೌನ್ ಪಾಲನೆ ಅತಿ ಅವಶ್ಯಕ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅಗತ್ಯ ವಿನಾಯಿತಿಗಳ ಬಗ್ಗೆ ವಿವರ ನೀಡಲಿದ್ದು ಅವುಗಳನ್ನು ಪಾಲಿಸುವುದರ ಜೊತೆಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕುಡಿಯುವ ನೀರಿನ ಕುರಿತಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದ್ದು ಎಲ್ಲೇ ನೀರಿನ ತೊಂದರೆಯಾದರೂ ಟ್ಯಾಂಕರ್‌ನಲ್ಲಿ ಒದಗಿಸಲು ಸೂಚಿಸಲಾಗಿದೆ.
ಮಳೆಗಾಲದ ಪೂರ್ವ ಸಿದ್ಧತೆಯಾಗಿ ಎಲ್ಲ ಇಲಾಖೆಗಳಲ್ಲೂ ಆಗಬೇಕಾದ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಸ್ಕಾಂನವರು ವಿದ್ಯುತ್ ಸಂಪರ್ಕ ಸಮರ್ಪಕವಾಗಿರಿಸಿಕೊಳ್ಳಲು ಮತ್ತೂಂದು ತಂಡವನ್ನು ಒದಗಿಸಲಾಗಿದೆ. ಆರೋಗ್ಯ ಇಲಾಖೆಗೆ ಕೂಡ ಮುನ್ನೆಚ್ಚರಿಕೆ ವಹಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಶಾಲೆ, ಅಂಗನವಾಡಿ ಮುಂತಾದವುಗಳ ಕಟ್ಟಡ, ಸಾಮಗ್ರಿಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಲು ನಿರ್ದೇಶನ ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೃಷಿಕರಿಗೆ ಅಗತ್ಯ ಸಾಮಗ್ರಿ, ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ. ಈ ಎಲ್ಲವುಗಳ ಮಧ್ಯೆ ಕೋವಿಡ್ 19 ರೋಗದ ಗಂಭೀರತೆ ನೆನಪಿಟ್ಟುಕೊಂಡು ಅಷ್ಟೇ ಗಂಭೀರತೆಯಿಂದ ಎಚ್ಚರ ವಹಿಸಬೇಕಿದೆ ಎಂದರು.
ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ ಇಒ ಪ್ರಶಾಂತ ರಾವ್, ಇನ್ನಿತರ ಅಧಿಕಾರಿಗಳು ಇದ್ದರು.