ನವದೆಹಲಿ: ದೇಶದಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ದೃಢವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಬುಧವಾರ ಸೋಂಕಿತರು ಮತ್ತು ಅವರ ಸಂಪರ್ಕಿತರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸೋಂಕಿತರು ಕಡ್ಡಾಯವಾಗಿ 21 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು. ಮಾಸ್ಕ್ ತೊಟ್ಟಿರಲೇಬೇಕು ಹಾಗೂ ಕೈಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ದೇಹದಲ್ಲಿ ಆದ ಗಾಯಗಳನ್ನು ಬಟ್ಟೆಯಿಂದ ಮುಚ್ಚಿಟ್ಟುಕೊಂಡಿರಬೇಕು ಹಾಗೂ ಅದು ಸಂಪೂರ್ಣವಾಗಿ ಮಾಯುವವರೆಗೂ ಯಾರೊಂದಿಗೂ ಸಂಪರ್ಕಕ್ಕೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಕೇರಳದಲ್ಲಿ ಮೂರು ಪ್ರಕರಣಗಳು ದೃಢವಾಗಿದ್ದು, ದೆಹಲಿಯಲ್ಲಿ ಒಂದು ಪ್ರಕರಣದ ದೃಢವಾಗಿದೆ. ದೆಹಲಿಯಲ್ಲಿನ ಸೋಂಕಿತನ ಪ್ರಾರ್ಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಆದರೆ ದೆಹಲಿಯ ಲೋಕನಾಯಕ್ ಜಯ್ ಪ್ರಕಾಶ್ ಆಸ್ಪತ್ರೆಗೆ ಮತ್ತೋರ್ವ ವ್ಯಕ್ತಿ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳೊಂದಿಗೆ ದಾಖಲಾಗಿದ್ದಾನೆ.
ಹಾಗೆಯೇ ಉತ್ತರ ಪ್ರದೇಶದ 47 ವರ್ಷದ ವ್ಯಕ್ತಿಯಲ್ಲೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಈ ಇಬ್ಬರದ್ದೂ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
ಬಿಡ್ ಆಹ್ವಾನ: ಮಂಕಿಪಾಕ್ಸ್ ಲಸಿಕೆಯನ್ನು ಉತ್ಪಾದಿಸುವ ಕುರಿತಂತೆ ಕೇಂದ್ರ ಸರ್ಕಾರ, ಜಾಗತಿಕ ಮಟ್ಟದ ಟೆಂಡರ್ (ಇಒಐ) ಆಹ್ವಾನಿಸಿದೆ. ಲಸಿಕೆ ಮಾತ್ರವಲ್ಲದೆ, ಇನ್-ವಿಟ್ರೋ ಡಯಾಗ್ನಾಸ್ಟಿಕ್ (ಐವಿಡಿ) ಕಿಟ್ ತಯಾರಿಕೆಗೆ ಹಾಗೂ ಸೋಂಕು ಪತ್ತೆ ಸಾಧನಗಳ ಉತ್ಪಾದನೆಗೂ ಬಿಡ್ ಆಹ್ವಾನಿಸಲಾಗಿದೆ.