Advertisement

ಕಾರ್ಕಳದಲ್ಲೂ ಮಂಕಿಮ್ಯಾನ್‌ ಖ್ಯಾತಿಯ ಜ್ಯೋತಿರಾಜ್‌ ಬಹುಮಹಡಿ ಕಟ್ಟಡವೇರಿ ಸಾಹಸ

10:59 AM Feb 16, 2023 | Team Udayavani |

ಕಾರ್ಕಳ: ಎತ್ತರದ ಬೆಟ್ಟ, ಕಟ್ಟಡಗಳನ್ನು ತಾನು ಏರುವ ಸಾಹಸವನ್ನು ನೀವು ನೋಡಿ ಖುಷಿಪಡಿ. ಯಾವತ್ತೂ ಇದೇ ತರಹ ಅನುಸರಿಸುವ ಸಾಹಸಕ್ಕೆ ಇಳಿಯಬೇಡಿ. ಅಪಾಯ ತಂದುಕೊಳ್ಳಬೇಡಿ ಎಂದು ಜ್ಯೋತಿರಾಜ್‌ ಆಲಿಯಾಸ್‌ ಕೋತಿರಾಜ್‌ ಹೇಳಿದರು. ಭಾರತದ ಮಂಕಿಮ್ಯಾನ್‌ ಎಂಬ ಖ್ಯಾತಿ ಪಡೆದಿರುವ ಜ್ಯೋತಿರಾಜ್‌ ಕಾರ್ಕಳದ ಸಾಲ್ಮರ ಬಳಿಯಿರುವ ಬಹುಮಹಡಿ ಕಟ್ಟಡವೇರುವ ಸಾಹಸವನ್ನು ಬುಧವಾರ ಬೆಳಗ್ಗೆ ಪ್ರದರ್ಶಿಸಿದ್ದರು.

Advertisement

125 ಅಡಿ ಎತ್ತರದ ಕಟ್ಟಡವನ್ನು ಕೇವಲ 10 ನಿಮಿಷಗಳಲ್ಲಿ ಸರಸರನೇ ಹತ್ತಿಳಿದಾಗ ಅಲ್ಲಿದ್ದವರು ನಿಟ್ಟುಸಿರು ಬಿಟ್ಟರು. ಇದನ್ನು ನೋಡಲು 500ಕ್ಕೂ ಅಧಿಕ ಕುತೂಹಲಿಗಳು ನೆರೆದಿದ್ದರು. ಪೊಲೀಸರು ಭದ್ರತೆ ವ್ಯವಸ್ಥೆ ಮಾಡಿ, ವಾಹನಗಳನ್ನು ಏಕಮುಖ ರಸ್ತೆಯಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಟ್ಟಡದ ತುತ್ತತುದಿಯಲ್ಲಿ ಕನ್ನಡ ನಾಡಿನ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಅವರು ಮೆರೆದರು.

ಕಾರ್ಕಳದ ಪ್ರೀತಿಗೆ ಚಿರಋಣಿ

ರಾಜ್ಯದೆಲ್ಲೆಡೆ ಸುತ್ತಾಟ ಆರಂಭಿಸಿದ್ದೇನೆ. ಜೋಗ ಜಲಪಾತ ಏರುವಾಗ ಬಿದ್ದು ಗಾಯಗೊಂಡಿದ್ದೆ. ಎರಡು ವರ್ಷಗಳ ಬಳಿಕ ಮತ್ತೆ ಸಾಹಸ ವೃತ್ತಿಗೆ ಮರಳಿದ್ದೇನೆ. ಮೊದಲ ಪ್ರಯತ್ನವಾಗಿ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿಳಿದ ಬಳಿಕ ಕಾರ್ಕಳದ ಸಮೃದ್ಧಿ ಕಟ್ಟಡ ಏರಿದ್ದೇನೆ.

ಅನುಮತಿಗಾಗಿ ಸಚಿವ ವಿ. ಸುನಿಲ್‌ ಕುಮಾರ್‌ ಹಾಗೂ ಉದ್ಯಮಿ ಶ್ರೀನಿವಾಸ್‌ ಕಾಮತ್‌ ಮತ್ತಿತರರು ನೆರವು ನೀಡಿದ್ದಾರೆ. ಬಾಲಾಜಿ ಹೊಟೇಲ್‌ನವರು ಉತ್ತಮ ಆತಿಥ್ಯ ನೀಡಿದರು. ಸಾಹಸ ಪ್ರದರ್ಶಿಸಿ ದೊರಕುವ ಹಣವನ್ನು ಫೌಂಡೇಶನ್‌ ಸ್ಥಾಪಿಸಿ ಬಡ ಮಕ್ಕಳ ನೆರವಿಗೆ ವಿನಿಯೋಗಿಸುವುದಾಗಿ ತಿಳಿಸಿದರು.

Advertisement

ಸಾಹಸಿಗೆ ಗೌರವಾರ್ಪಣೆ

ಉದ್ಯಮಿ ನಿತ್ಯಾನಂದ ಪೈ ಜ್ಯೋತಿರಾಜ್‌ ಅವರನ್ನು ಅಭಿನಂದಿಸಿದರು. ಉದ್ಯಮಿ ಬೋಳ ಶ್ರೀನಿವಾಸ್‌ ಕಾಮತ್‌, ಸತೀಶ್‌ ಹೆಗ್ಡೆ ಬೈಲೂರು, ಅವಿನಾಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಣಿಪಾಲದಲ್ಲಿ ಸಾಹಸಗೈಯಲಿದ್ದೇನೆ
ಸಮೃದ್ಧ ಕಟ್ಟಡ ಬಳಕೆಯಾಗದೆ ಇದ್ದಿರುವದರಿಂದ ಕೈ ಹಿಡಿತ ಸಾಧ್ಯವಾಗದೇ ಏರುವಾಗ ಕೈ ಉರಿ ಬಂತು. ಬ್ಯಾಲೆನ್ಸ್‌ ಮಾಡಿಕೊಂಡು ಹತ್ತಿದೆ. ಜನಬಳಕೆಯಿಲ್ಲದೆ ಕಟ್ಟಡ ಹಾಳಾಗುತ್ತಿದೆ. ಇಲ್ಲಿಂದ ಮಣಿಪಾಲಕ್ಕೆ ತೆರಳುತ್ತೇನೆ. ಅಲ್ಲಿಯೂ ಬಹುಮಹಡಿ ಕಟ್ಟಡ ಏರಲಿದ್ದೇನೆ. ಅನುಮತಿ ಪಡೆದು ಆ ಕಾರ್ಯನಿರ್ವಹಿಸುವೆ. ಮಹಾಶಿವರಾತ್ರಿ ಮುಗಿಸಿಕೊಂಡು ಅಲ್ಲಿಂದ ತನ್ನ ಪ್ರವಾಸ ಮುಂದುವರಿಸುವುದಾಗಿ ಸಾಹಸಿಗ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next