Advertisement

ದ.ಕ.: ಶವ, ಉಣ್ಣಿಯ ಮಾದರಿ ಪರೀಕ್ಷೆಗೆ ರವಾನೆ

12:30 AM Jan 24, 2019 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಆದರೆ ಮಂಗಗಳ ಕಳೇಬರ ಮತ್ತು ಉಣ್ಣಿಯನ್ನು ಬಯಾಪ್ಸಿ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಂಗನ ಕಾಯಿಲೆ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ಕ್ರಮ ವಹಿಸಬೇಕು. ಸೋಂಕಿತ ಮಂಗನ ಶರೀರದಿಂದ ಹರಡುವ ಉಣ್ಣಿಗಳಿಂದ ಕಾಡಿಗೆ ತೆರಳುವ ಜನರಿಗೆ ಹರಡುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ನಿಗದಿತ ಅರಣ್ಯದ ಗಡಿ ಭಾಗಗಳಲ್ಲಿನ ಜನರಿಗಾಗಿ ಮೈಗೆ ಹಚ್ಚಿಕೊಳ್ಳಲು 300 ಬಾಟಲಿ ಡಿಎಂಪಿ ತೈಲ ವಿತರಿಸಲಾಗಿದೆ ಎಂದು ತಿಳಿಸಿದರು.

ದನಕರುಗಳನ್ನು ಕಾಡಿಗೆ ಬಿಡದಿರುವುದೇ ಒಳಿತು. ಕಾಡಿಗೆ ಹೋಗಲೇಬೇಕಾದ ಅನಿವಾರ್ಯವಿದ್ದಲ್ಲಿ ಉದ್ದತೋಳಿನ ಅಂಗಿಗಳ ಬಳಕೆ, ಡಿಎಂಪಿ ತೈಲವನ್ನು ಮೈಗೆ ಹಚ್ಚಿಕೊಳ್ಳಬೇಕು. ಮಂಗಗಳು ಸತ್ತಿರುವುದು ಕಂಡು ಬಂದಲ್ಲಿ ತತ್‌ಕ್ಷಣ ಆರೋಗ್ಯ ಇಲಾಖೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದರು. ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಉಪಸ್ಥಿತರಿದ್ದರು.

ಮಂಗಗಳನ್ನು ಸುಡದಿರಿ
ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಸತ್ತ ಮಂಗ ಕಂಡುಬಂದರೆ ಸುಟ್ಟು ಹಾಕದೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾಕುಪ್ರಾಣಿಗಳಲ್ಲಿ ಉಣ್ಣಿಗಳು ಕಂಡು ಬಂದರೆ ತಪಾಸಣೆಗೊಳಪಡಿಸಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ 9 ಮಂಗಗಳು ಸಾವನ್ನಪ್ಪಿವೆ. ಆದರೆ ಮಂಗನಕಾಯಿಲೆಯಿಂದ ಎನ್ನಲು ಸಾಧ್ಯವಿಲ್ಲ. ಪುತ್ತೂರಿನ ಕಡಬ ಕುಂಟಾಡಿ, ಬೆಳ್ತಂಗಡಿಯ ಪಡಂಗಡಿ ಕಣ್ಣಾಜೆ, ಉಜಿರೆಯ ಅತ್ತಾಜೆಯಿಂದ ಉಣ್ಣಿಗಳ ಮಾದರಿ ತಪಾಸಣೆಗೆ ಕಳುಹಿಸಲಾಗಿದೆ. ಕೊೖಲ, ಕಾಣಿಯೂರಿನಿಂದಲೂ ಸಂಗ್ರಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next