ಉಡುಪಿ: ಮಂಗನ ಕಾಯಿಲೆ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದಿರಬೇಕು ಎಂದು ಮಂಗನ ಕಾಯಿಲೆ ಕುರಿತ ಸತ್ಯಶೋಧನ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿ ಕಾರಿ ಮದನ್ ಗೋಪಾಲ್ ತಿಳಿಸಿದ್ದಾರೆ.
ಮಂಗನ ಕಾಯಿಲೆ ನಿಯಂತ್ರಣ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಶುಕ್ರವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಫೆ. 24ರಂದು ವರದಿ ಸರಕಾರಕ್ಕೆ ಸಲ್ಲಿಸಲಿದೆ ಎಂದರು.
ಪ್ರತೀ ಪ್ರಾ. ಆ. ಕೇಂದ್ರ ಮಟ್ಟದಲ್ಲಿ ಯೋಜನೆ ರೂಪಿಸಿ ಕಾರ್ಯನಿರ್ವಹಿಸಿ. ಅರಣ್ಯ, ಪಶು ಪಾಲನೆ ಸಹಿತ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ಎಲ್ಲ ತಾಲೂಕುಗಳಿಗೆ ನೋಡಲ್ ಅಧಿ ಕಾರಿಗಳನ್ನಾಗಿ ನೇಮಿಸಬೇಕು ಎಂದರು.
ಜಿಲ್ಲೆಯಲ್ಲಿ ಈ ವರೆಗೆ ಮನುಷ್ಯರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿಲ್ಲ, 129 ಮಂಗಗಳ ಸಾವು ಸಂಭವಿಸಿದ್ದು, 48ರ ಮರಣೋತ್ತರ ಪರೀಕ್ಷೆ ಮಾಡಲಾ ಗಿದೆ. ಸಾವು ಸಂಭವಿಸಿದ 5 ಕಿ.ಮೀ. ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕ್ಕೆ ವಹಿಸಲಾಗಿದೆ. ಅರಣ್ಯದಂಚಿನ ಜನರಿಗೆ ಡಿಎಂಪಿ ತೈಲ ವಿತರಿಸಲಾಗುತ್ತಿದ್ದು, 3,850 ಬಾಟಲ್ ಡಿಎಂಪಿ ತೈಲ ಸರಬರಾಜಾಗಿದ್ದು, ಹೆಚ್ಚಿನ ತೈಲಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಶೀಘ್ರ ದಲ್ಲಿ ದೊರೆಯಲಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ 171 ಸಂಶ ಯಾಸ್ಪದ ಮಂಗನ ಕಾಯಿ ಲೆಯ ರೋಗಿಗಳು ದಾಖ ಲಾಗಿದ್ದು, 146 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 64 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು 107 ನಗೆಟಿವ್ ಆಗಿದೆ, 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಪ್ರಶಾಂತ್ ಭಟ್ ಮಾಹಿತಿ ನೀಡಿದರು.
ಡಿಸಿ ಹೆಪ್ಸಿಬಾ ರಾಣಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್, ಆರೋಗ್ಯ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ತಂಡ ಕೆಎಂಸಿಗೆ ಭೇಟಿ
ಉಡುಪಿ: ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಅವಲೋಕನ ನಡೆಸಲು ಉಡುಪಿ ಜಿಲ್ಲೆಗೆ ಆಗಮಿಸಿರುವ ಆರೋಗ್ಯ ಇಲಾಖೆಯ ರಾಜ್ಯ ತಂಡ ಶುಕ್ರವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿ ವೈರಸ್ ಸಂಶೋಧನಾ ಕೇಂದ್ರ (ಎಂಸಿವಿಆರ್) ತಜ್ಞರೊಂದಿಗೆ ಚರ್ಚಿಸಿತು. ಕಳೆದೆರಡು ದಿನಗಳಲ್ಲಿ ಹೆಬ್ರಿಯ ಶಿವಪುರದಲ್ಲಿ 4, ಪಳ್ಳಿ, ಕಕ್ಕುಂಜೆ, ನಿಟ್ಟೆ, ಮೊಳಹಳ್ಳಿ, ಹಾವಂಜೆ, ಹೇರೂರು, ಹಿಲಿಯಾಣ ಪರಿಸರದಲ್ಲಿ ತಲಾ ಒಂದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11 ಮಂಗಗಳ ಶವಗಳು ಪತ್ತೆಯಾಗಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.