ಬೆಳ್ಮಣ್: ಬೋಳ, ಬೆಳ್ಮಣ್ ಹಾಗೂ ಮುಂಡ್ಕೂರು ಪರಿಸರದಲ್ಲಿ ಮಂಗಗಳ ಕಾಟ ಅತಿ ಯಾಗಿದೆ. ತೆಂಗು, ಬಾಳೆ, ಹಲಸು ಸಹಿತ ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಕರು ಮಂಗಗಳ ಕಾಟದಿಂದ ಹೈರಾಣಾಗುವ ಜತೆಗೆ, ಬೆಳೆ ಹಾಳಾಗಿ ನಷ್ಟ ಅನುಭವಿಸುತ್ತಿದ್ದಾರೆ.
ದೇಗುಲಗಳ ಪಕ್ಕ ಬೀಡು
ಮುಂಡ್ಕೂರು, ಬೆಳ್ಮಣ್ ಹಾಗೂ ಬೋಳ ದೇಗುಲಗಳ ಪಕ್ಕದಲ್ಲಿಯೇ ಈ ಮಂಗಗಳ ಹಿಂಡು ಜಾಸ್ತಿಯಾಗಿದ್ದ್ದು ಇಲ್ಲಿ ನಿರಂತರವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಮಿಕ್ಕುಳಿದ ಆಹಾರಗಳನ್ನು ತಿಂದು ನೆಲೆಸಿರುವ ಮಂಗಗಳು ಉಳಿದ ಸಂದರ್ಭ ಊರಿನ ತೋಟಗಳಿಗೆ ಲಗ್ಗೆಯಿಡುತ್ತಿವೆ. ಬೆಳ್ಮಣ್ ಶ್ರೀ ಲಕ್ಷ್ಮೀಜನಾರ್ದನ ದೇಗುಲದ ಬಳಿ ಇನ್ನೂರಕ್ಕೂ ಮಿಕ್ಕಿ ಮಂಗಗಳು ವಾಸವಿವೆ.
ಈ ಹಿಂದೆ ಬೋಳ ಆಸುಪಾಸು ಕಾಡುಕೋಣಗಳ ಹಾವಳಿಯಿಂದ ತತ್ತರಿಸಿಹೋಗಿದ್ದ ಕೃಷಿಕರು ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿರುವಾಗಲೇ ಮಂಗಗಳ ಹಾವಳಿಯಿಂದ ಮತ್ತೆ ಕೈಸುಟ್ಟುಕೊಳ್ಳುವಂತಾಗಿದೆ. ಒಂದು ದಿನದಲ್ಲಿ ಸಾವಿರಾರು ತೆಂಗಿನ ಕಾಯಿಗಳನ್ನು ಹಾಳುಗೆಡಹುತ್ತಿವೆ. ತೆಂಗಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವಾಗಲೇ ಈ ರೀತಿ ಮಂಗಗಳ ಹಾವಳಿಯಾದರೆ ಬದುಕು ಹೇಗೆ ಎಂಬುದು ಈ ಭಾಗದ ರೈತರ ಪ್ರಶ್ನೆ.
ಕ್ರಮಕ್ಕೆ ಮುಂದಾಗದ ಇಲಾಖೆ
ಸೂರ್ಯೋದಯಕ್ಕೆ ಮುನ್ನವೇ ತೋಟಕ್ಕೆ ಮಂಗಗಳು ಲಗ್ಗೆ ಇಡುತ್ತಿದ್ದು, ಇವುಗಳನ್ನು ಕೊಲ್ಲು ವಂತೆಯೂ ಇಲ್ಲ. ಕನಿಷ್ಠ ಪಕ್ಷ ಅರಣ್ಯ ಇಲಾಖೆ ಯಾದರೂ ಈ ಬಗ್ಗೆ ಗಮನಹರಿಸಿ ಶೀಘ್ರ ಸಮಸ್ಯೆ ಬಗೆ ಹರಿಸಬೇಕಿತ್ತು. ಆದರೆ ಈ ವರೆಗೂ ಇಲಾಖೆ ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
– ಶರತ್ ಶೆಟ್ಟಿ ಮುಂಡ್ಕೂರು