Advertisement

ಬೀಜ-ಗೊಬ್ಬರ ದಾಸ್ತಾನು ನಿಗಾವಹಿಸಿ: ಅಜಯಸಿಂಗ್

11:08 AM Jul 16, 2022 | Team Udayavani |

ಜೇವರ್ಗಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಖುದ್ದು ನಿಗಾವಹಿಸಬೇಕು ಎಂದು ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯಾದ ನಂತರ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರಿಂದ ದಿಢೀರ್‌ ಬೇಡಿಕೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಅನಾನುಕೂಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂಚಿತವಾಗಿ ಬೀಜ, ಗೊಬ್ಬರಗಳ ಸಮರ್ಪಕ ದಾಸ್ತಾನು ಮಾಡಿಕೊಳ್ಳಬೇಕು. ರೈತರಿಗೆ ಮಾಹಿತಿ ಒದಗಿಸಲು ಅಥವಾ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು ಎಂದು ಸೂಚಿಸಿದರು.

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಎಲ್ಲ ಹೋಬಳಿ ಸೇರಿದಂತೆ 1,110ಟನ್‌ ಯೂರಿಯಾ, ಡಿಎಪಿ 503ಟನ್‌, ಎಂಒಪಿ 31ಟನ್‌, ಎಸ್‌ಎಸ್‌ಪಿ 54ಟನ್‌, 370ಟನ್‌ ಕಾಂಪ್ಲೆಕ್ಸ್‌ ಗೊಬ್ಬರವನ್ನು ವಿವಿಧ ಕೃಷಿ ಪರಿಕರ ಮಾರಾಟಗಾರರ ಮಳಿಗೆಯಲ್ಲಿ ದಾಸ್ತಾನಿಕರಿಸಲಾಗಿದೆ. ರೈತರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಸದ್ಯ ರೈತರಿಗೆ ಯಾವುದೇ ರಸಗೊಬ್ಬರದ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ತೊಂದರೆಯಾದಲ್ಲಿ ಹಾಗೂ ಹೆಚ್ಚಿನ ಬೆಲೆಯಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರ ಇಲ್ಲವೇ ಸಹಾಯಕ ಕೃಷಿ ನಿರ್ದೇಶಕರನ್ನು ಭೇಟಿ ಮಾಡಿ ಎಂದು ಸೂಚಿಸಿದರು.

Advertisement

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಒಟ್ಟು 45ಮನೆಗಳು ಬಿದ್ದಿದ್ದು, ಮನೆ ಹಾನಿಗೀಡಾದ ಕುಟುಂಬದ ಸದಸ್ಯರಿಗೆ ತಕ್ಷಣ 10ಸಾವಿರ ರೂ. ಪರಿಹಾರ ಧನ ನೀಡಲಾಗಿದೆ. ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಕಳೆದ ವರ್ಷ ಭೀಮಾನದಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 24,999ರೈತರಿಗೆ 31.4 ಕೋಟಿ ರೂ. ಬೆಳೆಹಾನಿ ಪರಿಹಾರ ನೀಡಲಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಯಡ್ರಾಮಿ ತಹಶೀಲ್ದಾರ್‌ ಶಾಂತಗೌಡ ಬಿರಾದಾರ, ಜೇವರ್ಗಿ ತಾಲೂಕು ಪಂಚಾಯತ್‌ ಇಒ ಅಬ್ದುಲ್‌ ನಬಿ, ಯಡ್ರಾಮಿ ತಾಪಂ ಇಒ ಮಹಾಂತೇಶ ಪುರಾಣಿಕ, ಸಿಪಿಐ ಶಿವಪ್ರಸಾದ ಮಠದ್‌, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ರಂಗಣಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಬಿಸಿಎಂ ಅಕಾರಿ ಮಹೇಶ ನಾಯಕ, ಸಿಡಿಪಿಒ ದೀಪಿಕಾ, ಪಿಎಸ್‌ಐ ಸಂಗಮೇಶ ಅಂಗಡಿ, ಲೋಕೋಪಯೋಗಿ, ಪಂಚಾಯತ್‌ರಾಜ್‌ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next