Advertisement

ಗಡಿಭಾಗದ ಅನ್ಯ ಮಾರ್ಗಗಳಲ್ಲಿ ನಿಗಾ ಅವಶ್ಯ

11:51 AM Dec 04, 2021 | Team Udayavani |

ಅಫಜಲಪುರ: ಕೊರೊನಾ ಮಹಾಮಾರಿ ತನ್ನ ರೂಪ ಬದಲಿಸಿಕೊಂಡು ಮತ್ತೆ ಕಾಲಿಟ್ಟಿದ್ದರಿಂದ ಸರ್ಕಾರ ಮತ್ತೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಆದರೆ ಈ ನಿಯಮಗಳ ಪಾಲನೆಗೆ ನಿರ್ಮಿಸಲಾದ ಚೆಕ್‌ಪೋಸ್ಟ್‌ ಬಿಟ್ಟು ಗಡಿಭಾಗದ ಜನರು ಅನ್ಯಮಾರ್ಗದಿಂದ ರಾಜ್ಯದೊಳಗೆ ಪ್ರವೇಶಿಸುತ್ತಿದ್ದಾರೆ.

Advertisement

ನಾಮಕೇವಾಸ್ತೆ ಚೆಕ್ಪೋಸ್ಟ್

ತಾಲೂಕಿನ ಮಾಶಾಳ, ಬಳೂರ್ಗಿ, ಅರ್ಜುಣಗಿ ಗ್ರಾಮಗಳ ಮಹಾರಾಷ್ಟ್ರ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ತಾಲೂಕಿಗೆ ಪ್ರವೇಶ ಪಡೆಯುವ ವಾಹನಗಳ ಮೇಲೆ ನಿಗಾ ಇಡುವ ಕೆಲಸ ನಡೆಯುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಇದ್ದ ಚೆಕ್‌ಪೋಸ್ಟ್‌ ಗಳು ನಾಮಕೇವಾಸ್ತೆ ಎನ್ನುವಂತೆ ಆಗಿದೆ.

ಮಣೂರ ಹೈದ್ರಾದಲ್ಲಿಲ್ಲ ನಿಯಮ

ತಾಲೂಕಿನ ಪ್ರಸಿದ್ಧ ಪುಣ್ಯಸ್ಥಳವಾಗಿರುವ ಮಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಯಾರೊಬ್ಬರು ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರವಿಲ್ಲ. ಹೀಗಾಗಿ ಕೋವಿಡ್‌ ರೂಪಾಂತರಿ ಆವರಿಸುವ ಭೀತಿ ಹೆಚ್ಚಾಗಿದೆ. ಅಲ್ಲದೇ ಕರ್ನಾಟಕ ಮಹಾರಾಷ್ಟ್ರದ ಪುಣ್ಯಸ್ಥಳವಾಗಿರುವ ಹೈದ್ರಾದಲ್ಲೂ ಭಕ್ತರ ದಂಡು ಹೆಚ್ಚಾಗಿದೆ. ಇಲ್ಲಿಂದಲೂ ತಾಲೂಕಿಗೆ ಹೆಚ್ಚು ಜನರು ಬರುತ್ತಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳು ಈ ಗ್ರಾಮದ ದರ್ಗಾದಲ್ಲಿ ಹೆಚ್ಚಿನ ನಿಗಾ ವಹಿಸುವ ಅವಶ್ಯತೆಯಿದೆ.

Advertisement

ಅನ್ಯ ಮಾರ್ಗದಿಂದ ಬರುವ ಜನ

ತಾಲೂಕಿನ ಮೂರು ಚೆಕ್‌ಪೋಸ್ಟ್‌ಗಳ ಕಣ್ಣು ತಪ್ಪಿಸಿ ಅನ್ಯ ಮಾರ್ಗದಿಂದ ಜನರು ತಾಲೂಕಿಗೆ ಆಗಮಿಸುತ್ತಿದ್ದಾರೆ. ತಾಲೂಕಿನ ಜೇವರ್ಗಿ, ಹೈದ್ರಾ, ಮಾಶಾಳ ತಾಂಡಾ, ಅರ್ಜುಣಗಿ, ಸಿನ್ನೂರ ಬಡದಾಳ ಮಾರ್ಗವಾಗಿ ಹೆಚ್ಚಿನವರು ಮಹಾರಾಷ್ಟ್ರದಿಂದ ತಾಲೂಕಿಗೆ ಪ್ರವೇಶ ಪಡೆಯುತ್ತಿದ್ದಾರೆ. ಹೀಗೆ ಬರುವ ಜನರಿಂದ ಕೋವಿಡ್‌ ರೂಪಾಂತರಿ ವ್ಯಾಪಿಸುವ ಭೀತಿ ಹೆಚ್ಚಾಗಿದೆ.

ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕೋವಿಡ್‌ ಮಹಾಮಾರಿ ಹರಡುವ ಸಾಧ್ಯತೆಯಿದೆ. ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದು ಒಳ್ಳೆಯದಾಗಿದೆ. ಜತೆಗೆ ಸಿಬ್ಬಂದಿಗಳನ್ನು ಹೆಚ್ಚಿಸಿ ಸರಿಯಾಗಿ ಕೋವಿಡ್‌ ನಿಯಮಗಳನ್ನು ಪರೀಕ್ಷಿಸಬೇಕು. ಇನ್ನುಳಿದ ಗಡಿ ಗ್ರಾಮಗಳ ರಸ್ತೆಗಳಿಂದ ಜನರು ಒಳಗೆ ನುಸುಳುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಸಿದ್ಧರಾಮ ವಾಘ್ಮೋರೆ, ಸಾಮಾಜಿಕ ಕಾರ್ಯಕರ್ತ

ಈಗಾಗಲೇ ಗಡಿ ಭಾಗದಲ್ಲಿ ಮೂರು ಚೆಕ್‌ಪೋಸ್ಟ್‌ಗಳಿವೆ. ಅನ್ಯ ದಾರಿಯಿಂದ ಜನರು ಬರುವ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಇನ್ನೂ ಮೂರ್‍ನಾಲ್ಕು ಕಡೆ ಚೆಕ್‌ಪೋಸ್ಟ್‌ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಪ್ರಖ್ಯಾತವಾಗಿರುವ ಹಾಗೂ ಇನ್ನಿತರ ದೇಗುಲಗಳಿದ್ದು, ಅಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜನರು ಮಾಸ್ಕ್ ಧರಿಸಿ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಾಗವಹಿಸಬೇಕು. -ಕೆ. ನಾಗಮ್ಮ, ತಹಶೀಲ್ದಾರ್‌

ಜಿಲ್ಲಾಧಿಕಾರಿಗಳು ಆದೇಶ ನೀಡಿದರೆ ಗಡಿಭಾಗದ ಹೊಸೂರು, ಹೈದ್ರಾ ಕ್ರಾಸ್‌ ಹಾಗೂ ಇನ್ನಿತರ ಕಡೆಗಳಲ್ಲಿಯೂ ಚೆಕ್‌ಪೋಸ್ಟ್‌ ಸ್ಥಾಪಿಸಲಾಗುವುದು. ಜಗದೇವಪ್ಪ ಪಾಳಾ, ಸಿಪಿಐ

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next