ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ರಾಜ್ಯದ ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾದ 25.76 ಲಕ್ಷ ರೂ. ಹಣವಿದ್ದ ಬ್ಯಾಗ್ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಮೋಹನ್ ಬಂಧಿತ ಆರೋಪಿ. ಹಿಂದುಳಿದ ವರ್ಗಗಳ ಇಲಾಖೆ ಕಚೇರಿಯಲ್ಲಿ ಖಾಸಗಿ ಟೈಪಿಸ್ಟ್ ಆಗಿರುವ ಮೋಹನ್, ಶುಕ್ರವಾರ ಸಂಜೆ ವಿಧಾನಸೌಧ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಹಣದ ಬ್ಯಾಗ್ ಕೊಂಡೊಯ್ಯುತ್ತಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಆರೋಪಿಗೆ ಬ್ಯಾಗ್ ತೋರಿಸುವಂತೆ ಸೂಚಿಸಿದ್ದಾರೆ. ಆತಂಕಗೊಂಡ ಆರೋಪಿ ಬ್ಯಾಗ್ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಬೆನ್ನತ್ತಿದ್ದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಲಕ್ಷಾಂತರ ರೂ. ಹಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಹಣದ ಬಗ್ಗೆ ಪ್ರಶ್ನಿಸಿದಾಗ ಆರೋಪಿ ಗೊಂದಲದ ಹೇಳಿಕೆ ನೀಡಿದ್ದು, 14 ಲಕ್ಷ ರೂ. ಹಣ ಇರುವುದಾಗಿ ಹೇಳಿಕೆ ನೀಡಿದ್ದ. ಆದರೆ, ಠಾಣೆಗೆ ಕರೆದೊಯ್ದು ಬ್ಯಾಗ್ ಪರಿಶೀಲಿಸಿದಾಗ ನಾಲ್ಕು ಕವರ್‌ಗಳಲ್ಲಿ 25, 76 ಲಕ್ಷ ರೂ. ಹಣ ಪತ್ತೆಯಾಗಿದೆ ಪೊಲೀಸರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಸಿದ್ದರಾಜು, ದಾಖಲೆ ಇಲ್ಲದ ಲಕ್ಷಾಂತರ ರೂ. ಹಣ ಕೊಂಡೊಯ್ಯುತ್ತಿದ್ದ ಮೋಹನ್ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 25.76 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಪ್ರಾಥಮಿಕ ವಿಚಾರಣೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿಯಲ್ಲಿ ಖಾಸಗಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿ ಹಾಗೂ ಬ್ಯಾಗ್‌ನಲ್ಲಿರುವ ಹಣ ಸ್ವಂತದ್ದು ಎಂದು ಹೇಳಿಕೆ ನೀಡಿದ್ದಾನೆ.
ಇಷ್ಟೊಂದು ದೊಡ್ಡ ಮೊತ್ತದ ಹಣ ವಿಧಾನಸೌಧಕ್ಕೆ ಯಾರು ತಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದರು.
ಮೂರು ವರ್ಷಗಳ ಹಿಂದೆ ವಕೀಲರೊಬ್ಬರು ಇದೇ ಪ್ರವೇಶ ದ್ವಾರದ ಮೂಲಕ ದಾಖಲೆ ಇಲ್ಲದ 2 ಕೋಟಿ ರೂ. ಹಣ ಕೊಂಡೊಯ್ಯುತ್ತಿದ್ದರು. ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕಾರು ತಪಾಸಣೆ ವೇಳೆ ಹಣ ಬ್ಯಾಗ್ ಪತ್ತೆಯಾಗಿತ್ತು.