ದೇವದುರ್ಗ: ಪಡಿತರ ಚೀಟಿ ವಿತರಣೆಯಲ್ಲಿನ ಅವ್ಯವಹಾರ ತಡೆಗೆ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಗೆ ತಂದಿದ್ದರೂ ಅಧಿಕಾರಿಗಳು ಇಲ್ಲೂ ಫ್ರಾಂಚೈಸಿ ಕೇಂದ್ರಗಳ ಮೂಲಕ ಅರ್ಜಿದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ಹೆಸರು ತಿದ್ದುಪಡಿ, ಸೇರ್ಪಡೆ, ಆಧಾರ್ ಲಿಂಕ್, ಬಯೋಮೆಟ್ರಿಕ್ ನೀಡಲು ಆಹಾರ ಇಲಾಖೆ ಖಾಸಗಿ ಆನ್‌ಲೈನ್ ಸೆಂಟರ್‌ಗಳಿಗೆ ಪ್ರಾಂಚೈಸಿ ನೀಡಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ 50 ರೂ. ಪಡೆಯಬೇಕೆಂಬ ನಿಯಮವಿದ್ದರೂ ಫ್ರಾಂಚೈಸಿ ಪಡೆದವರು ಅಧಿಕಾರಿಗಳ ಹೆಸರು ಹೇಳಿ 200ರಿಂದ 300 ರೂ. ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದವರಿಗೆ ಆಧಾರ್ ಲಿಂಕ್ ಆಗಿಲ್ಲ, ಬಯೋಮೆಟ್ರಿಕ್ ಸರಿ ಆಗಿಲ್ಲ, ಥಂಬ್ ತೆಗೆದುಕೊಂಡಿಲ್ಲ, ದಾಖಲೆಗಳು ಸರಿ ಇಲ್ಲ ಎಂಬ ಸಬೂಬು ಹೇಳಿ ಸಾಗಹಾಕಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ರೈತರು, ಕೂಲಿಕಾರರು ಕೆಲಸ ಬಿಟ್ಟು ಅಲೆದಾಡಲು ಆಗದೇ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ. ಇನ್ನು 1500 ರೂ.ದಿಂದ 2000 ರೂ. ಕೊಟ್ಟರೆ ಕೆಲ ದಿನದಲ್ಲಿ ಪಡಿತರ ಚೀಟಿ ಕೊಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅರ್ಜಿ ಸಲ್ಲಿಕೆ: ಈಗಾಗಲೇ ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗೆ 2,886 ಅರ್ಜಿ ಸಲ್ಲಿಕೆಯಾಗಿವೆ ಎನ್ನಲಾಗಿದೆ. ತಾಲೂಕಿನಲ್ಲಿ ಮಾಹಿತಿ ಸಿಂಧು ಯೋಜನೆ ಮೂಲಕ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ 12 ಕೇಂದ್ರಗಳಿಗೆ ಫ್ರಾಂಚೈಸಿ ನೀಡಲಾಗಿದೆ.
ದೇವದುರ್ಗ ಪಟ್ಟಣದಲ್ಲಂತೂ ಫ್ರಾಂಚೈಸಿಗಳು ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಪಡಿತರ ಚೀಟಿ ಅರ್ಜಿದಾರರಿಂದ ಹಣ ವಸೂಲಿಗೆ ಇಳಿದಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧ ಸುತ್ತಲೂ ಇಂಥ ಹಾವಳಿ ನಡೆದಿದೆ. 50 ರೂ. ಪಡೆಯಬೇಕಿದ್ದರೂ ನೂರಾರು ಪಡೆಯುತ್ತಿರುವುದನ್ನು ಗ್ರಾಹಕರು ಪ್ರಶ್ನಿಸಿದರೆ, ಆಹಾರ ನಿರೀಕ್ಷಕರಿಗೆ ನಾವು ಹಣ ಕೊಡಬೇಕು ಎಂದು ಫ್ರಾಂಚೈಸಿಯವರು ಹೇಳುತ್ತಿದ್ದಾರೆ. ಹೀಗಾಗಿ ಈ ಅಕ್ರಮದಲ್ಲಿ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಗ್ರಾಮೀಣ ಭಾಗದಲ್ಲೂ ಅಕ್ರಮ: ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆ ವ್ಯವಸ್ಥೆಯನ್ನು ಸಹಕಾರಿ ಸಂಘಗಳಿಗೆ ನೀಡಲಾಗಿದೆ. ಆದರೆ ಇಲ್ಲಿನ ಸಿಬ್ಬಂದಿಗೆ ಕಂಪ್ಯೂಟರ್ ಬಳಸುವ ಜ್ಞಾನ ಇಲ್ಲದ್ದರಿಂದ ಖಾಸಗಿ ಆಪರೇಟರ್‌ಗಳನ್ನು ಕರೆತಂದು ಪಡಿತರ ವಿತರಣೆ ಮಾಡುತ್ತಿದ್ದಾರೆ. ಇವರು ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಮುಂಡರಗಿ ಮತ್ತು ಇಟಗಿ ಗ್ರಾಮಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ.
ಆಗ್ರಹ: ಪಡಿತರ ಚೀಟಿ ಫಲಾನುಭವಿಗಳು, ಅರ್ಜಿದಾರರಿಂದ ಸುಲಿಗೆ ಮಾಡುತ್ತಿರುವ ಫ್ರಾಂಚೈಸಿ ಕೇಂದ್ರಗಳು ಮತ್ತು ಇದಕ್ಕೆ ಬೆಂಬಲ ನೀಡುತ್ತಿರುವ ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಳಾಪುರ ಆಗ್ರಹಿಸಿದ್ದಾರೆ.
•ನಾಗರಾಜ ತೇಲ್ಕರ್