ಬೆಂಗಳೂರು:ಬೆಂಗಳೂರು ಮತ್ತು ಹಾವೇರಿಯಲ್ಲಿ ಐಟಿ ಇಲಾಖೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಲೋಕಸಭಾ ಚುನಾವಣೆಗಾಗಿ ರಾಹುಲ್ ಗಾಂಧಿಗೆ ನೀಡಲು ಹಣ ಸಂಗ್ರಹಿಸಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ಐಟಿ ಇಲಾಖೆ ನಡೆಸಿದ ದಾಳಿಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರಿಂದ 2 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ. ವಿಚಾರಣೆ ಸಂದರ್ಭದಲ್ಲಿ ಕೃಷ್ಣಭೈರೇಗೌಡ ಹೆಸರನ್ನು ಹೇಳಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗಾಗಿ ಹಣ ಸಂಗ್ರಹಿಸುತ್ತಿದೆ ಎಂದು ಬಿಎಸ್ ವೈ ದೂರಿದ್ದಾರೆ.
ಈ ಬಗ್ಗೆ ಕೃಷ್ಣ ಭೈರೇಗೌಡ ಅವರು ಕೂಡಲೇ ಉತ್ತರ ನೀಡಬೇಕು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಇರುವುದು 10% ಮೈತ್ರಿ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ಇದು ಹತ್ತು ಪರ್ಸೆಂಟ್ ಅಲ್ಲ, ಇಪ್ಪತ್ತು ಪರ್ಸೆಂಟ್ ನ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಆರೋಪ ಮಾಡುವುದು ಬಿಜೆಪಿ ಅಭ್ಯಾಸ: ಕೃಷ್ಣ ಭೈರೇಗೌಡ
ಖಾಸಗಿ ಹೋಟೆಲ್ ನಲ್ಲಿ ಐಟಿ ದಾಳಿ ಮಾಡಿ ವಶಪಡಿಸಿಕೊಂಡಿರುವ ಹಣದ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಇಲಾಖೆ ವರದಿ ನೀಡಿದ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣದ ಸಂದರ್ಭದಲ್ಲಿ ಆರೋಪ ಮಾಡುವುದು ಬಿಜೆಪಿಗೆ ಅಭ್ಯಾಸವಾಗಿದೆ. ಬಹುಶಃ ಯಡಿಯೂರಪ್ಪನವರಿಗೆ ಆ ರೀತಿ ಅಭ್ಯಾಸ ಇರಬಹುದು ಎಂದು ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.