ಚೆನ್ನೈ: ತಂದೆ ಇಲ್ಲದ ಮಗಳನ್ನು ಸಾಕುವುದಕ್ಕಾಗಿ ತಾಯಿಯೊಬ್ಬಳು ತಂದೆಯಂತೆ ಜವಾಬ್ದಾರಿ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ತಮಿಳುನಾಡಿನ ಈ ಮಹಿಳೆ ತಂದೆಯಂತೆ ಜವಾಬ್ದಾರಿ ತೆಗೆದುಕೊಳ್ಳುವುದಷ್ಟೇ ಅಲ್ಲ, ವೇಷಭೂಷಣದಲ್ಲೂ ತಂದೆಯಾಗಿದ್ದಾರೆ!
20ನೇ ವಯಸ್ಸಿನಲ್ಲೇ ಮದುವೆಯಾದ ತೂತುಕುಡಿ ಜಿಲ್ಲೆಯ ಪೆಚಿಯೆಮ್ಮಲ್(57) ಅವರ ಪತಿ ಮದುವೆಯಾಗಿ ಹದಿನೈದೇ ದಿನಕ್ಕೆ ಅವರ ಪತಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ಅದಾಗಲೇ ಗರ್ಭದಲ್ಲಿ ಮಗು ಹೊತ್ತಿದ್ದ ಪೆಚಿಯೆಮ್ಮಲ್, ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಕೆಲಸಕ್ಕಾಗಿ ಹಲವೆಡೆ ಸುತ್ತಾಡಿದ್ದಾರೆ.
ಆದರೆ ಒಂಟಿ ಹೆಣ್ಣೆನ್ನುವ ಕಾರಣಕ್ಕೆ ಅನೇಕರು ಆವರನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರಂತೆ. ಆಗ ಗಟ್ಟಿ ನಿರ್ಧಾರ ಮಾಡಿದ ಅವರು ತಲೆ ಕೂದಲನ್ನು ಗಂಡು ಮಕ್ಕಳಂತೆ ಕತ್ತರಿಸಿ, ಲುಂಗಿ- ಶರ್ಟು ತೊಟ್ಟು, ತನ್ನನ್ನು ಎಲ್ಲರಿಗೂ ಮುತ್ತು ಎಂದು ಪರಿಚಯಿಸಿಕೊಂಡರು.
ಅಂದಿನಿಂದ ಅವರು ಮುತ್ತು ಆಗಿಯೇ ಹಲವು ಕೆಲಸಗಳನ್ನು ಮಾಡಿದ್ದಾರೆ. ಹೋಟೆಲ್‌ಗಳಲ್ಲಿ, ಟೀ ಶಾಪ್‌ಗಳಲ್ಲಿ, ಪೇಂಟರ್ ಆಗಿ ಹೀಗೆ ಪ್ರತಿಯೊಂದು ಕೆಲಸವನ್ನೂ ಗಂಡಿನಂತೆಯೇ ಮಾಡಿದ್ದಾರೆ. ಬಸ್ಸಿನಲ್ಲಿ ತೆರಳುವಾಗ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದ್ದರೂ, ಗಂಡು ಮಕ್ಕಳು ಕೂರುವಲ್ಲೇ ಕುಳಿತು, ಹಣ ಕೊಟ್ಟೇ ಪ್ರಯಾಣಿಸಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಸರ್ಕಾರದಿಂದ ವಿಶೇಷ ಸೌಲಭ್ಯಗಳು ಬಂದರೂ ಯಾವುದತ್ತವೂ ತಲೆಯನ್ನೂ ಹಾಕಲಿಲ್ಲ. ತನ್ನೆಲ್ಲ ದಾಖಲೆಗಳನ್ನೂ ಮುತ್ತು ಎಂದೇ ಬದಲಾಯಿಸಿಕೊಂಡು ಬದುಕುತ್ತಿದ್ದಾರೆ.
ಮುತ್ತುವಾಗಿಯೇ ಸಾಯುತ್ತೇನೆ:
ಈಗಾಗಲೇ ಪೆಚಿಯೆಮ್ಮಲ್ ಅವರ ಮಗಳ ಮದುವೆಯಾಗಿದೆ. ಆದರೂ ಅವರು ಮಾತ್ರ ಇನ್ನೂ ಮುತ್ತುವಾಗಿಯೇ ಇದ್ದಾರೆ. ನಾನು ಸಾಯುವಾಗಲೂ ಮುತ್ತುವಾಗಿಯೇ ಸಾಯಬೇಕೆನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ. ಪೆಚಿಯೆಮ್ಮಲ್ ಅವರ ರಹಸ್ಯ ಮಗಳಿಗೆ ಗೊತ್ತಿದ್ದು, “ಅಮ್ಮ ನನಗಾಗಿ ಬದುಕನ್ನೇ ಮುಡಿಪಿಟ್ಟಿದ್ದಾಳೆ. ಅವಳಿಗೆ ಸರ್ಕಾರದ ಸೌಲಭ್ಯಗಳು ಸಿಗಲಿ’ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.