Advertisement
“ಮಮ್ಮಿ ಇವತ್ ಮ್ಯಾಥ್ಸ್ ಕ್ಲಾಸ್‌ದಾಗ 12ರ ಟೇಬಲ್ಸ್ ಕಲ್ಸಿದ್ರು, ಮತ್ತ ಇಂಗ್ಲಿಷ್ ಕ್ಲಾಸ್‌ದಾಗ ತೆನಾಲಿರಾಮನ ಕಥೆ ಹೇಳಿದ್ರು…’ ಅನ್ನೋ ಏಳೂವರೆ ವರ್ಷದ ಮಗಳಿಗೆ, “ಹುಂ’ ಎಂದಷ್ಟೇ ಉತ್ತರಿಸಿದಳು ಅಮ್ಮ. ಜೊತೆಗೆ, “ಮಮ್ಮಿ , ಇವತ್ತು ಕ್ಲಾಸ್‌ನಾಗ ರೈಮ್ ಹೇಳಿದ್ರ, ಮತ್ತ ಮತ್ತ ಆಲ್ಫಾಬೆಟ್ ಬರಸಿದ್ರ, ನಾನ್ ರೈಮ್ಸ್ ಹಾಡೂದನ್ನ ಸ್ವಲ್ಪ ಕೇಳ’… ಎಂದು ನಾಲ್ಕೂವರೆ ವರ್ಷದ ಮಗು, ತಾಯಿಯ ನಿಷ್ಕಾಳಜಿಯನ್ನು ಕಂಡು, ಆಕೆಯ ಮುಖವನ್ನು ತನ್ನೆರಡು ಚಿಕ್ಕ ಚಿಕ್ಕ ಅಂಗೈಯಲ್ಲಿ ಹಿಡಿದು ಒತ್ತಾಯವಾಗಿ ತನ್ನೆಡೆಗೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿತ್ತು.
Related Articles
Advertisement
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಸಿಯೇ ತೀರಬೇಕೆಂಬ ಛಲದಿಂದ, ಅವರನ್ನು ಪ್ರೀತಿಯಿಂದ ಮನವೊಲಿಸಿ, ಅಭ್ಯಾಸದಲ್ಲಿ ಉತ್ಸಾಹ ತುಂಬುವವಳು ಶಿಕ್ಷಕಿಯೇ. ಅದು ಆಕೆಯ ವೃತ್ತಿ ಜೀವನಕ್ಕೆ ಅವಶ್ಯ ಹಾಗೂ ಪೂರಕವಾದದ್ದು.ಅದಕ್ಕೆ ವಿರುದ್ಧವಾದ ಸನ್ನಿವೇಶ ಮನೆಯಲ್ಲಿರುತ್ತದೆ. ಕಲಿಕೆಯಲ್ಲಿ ಅತೀವ ಆಸಕ್ತಿಯಿರುವ, ಅತೀ ಚೂಟಿಯಾದ ಮಗು , ತನ್ನೆಲ್ಲಾ ಹೊಮ್‌ವರ್ಕ್ ಮಾಡಿ , ತನಗೆ ಬುಕ್‌ಗಳಲ್ಲಿ ಸಿಕ್ಕ ಸ್ಟಾರ್‌ಗಳನ್ನು, ಅಮ್ಮನಿಗೆ ತೋರಿಸಲು ಉತ್ಸುಕವಾಗಿರುತ್ತದೆ. ಆದರೆ, ಅಮ್ಮನಿಗೋ ಸಮಯವಿಲ್ಲ. ಮಗು ಹೇಳುವುದನ್ನು ಗಮನವಿಟ್ಟು ಕೇಳುವ ತಾಳ್ಮೆಯಿಲ್ಲ. ಮನೆಯ ಮಕ್ಕಳಿಗೆ ನಮ್ಮದೇ ವೃತ್ತಿಯ ಸದುಪಯೋಗವಾಗುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ.
ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ. ಇದು ಒಬ್ಬರ ಸಮಸ್ಯೆಯಲ್ಲ, ಎಲ್ಲಾ ಉದ್ಯೋಗಸ್ಥ ಮಹಿಳೆಯರ ಸಮಸ್ಯೆ. ನಮ್ಮ ಡಿಗ್ರಿ, ನಾವು ಮಾಡುವ ವೃತ್ತಿ ನಮ್ಮ ಮಕ್ಕಳಿಗೆಯೇ ಉಪಯೋಗವಾಗುವುದಿಲ್ಲ. ದಿನದ 6-8 ಗಂಟೆಗಳನ್ನು ವೃತ್ತಿನಿರತ ತಾಯಿ ಕೆಲಸದಲ್ಲಿ ಕಳೆಯುವುದರಿಂದ, ಸಹಜವಾಗಿಯೇ ಆಕೆಗೆ ಸುಸ್ತು ಆವರಿಸುತ್ತದೆ. ಮಕ್ಕಳ ಬಗ್ಗೆ ತೋರುವ ನಿರಾಸಕ್ತಿ ಆಕೆಗೆ ಅರಿವಾಗದೇ ಇರದು. ಆದರೆ, ನೌಕರಿಯ ಅನಿವಾರ್ಯತೆ ಹಾಗೂ ಮಕ್ಕಳ ಕಾಳಜಿಯ ಮಧ್ಯೆ ಜೀವನ ಗರ್ರನೆ ತಿರುಗಿವ ಬುಗುರಿಯಾಗಿದೆ. ಗಟ್ಟಿಯಾಗಿ ನಿಲ್ಲಲಾಗದ ಪರಿಸ್ಥಿತಿಯಲ್ಲಿ ದೂಷಿಸುವುದಾದರೂ ಯಾರನ್ನು?
ಮಾಲಾ ಮ ಅಕ್ಕಿಶೆಟ್ಟಿ