ತಿರುವನಂತಪುರಂ: ಹೇಮಾ ಸಮಿತಿ ವರದಿಯ (Hema Committee Report) ಸಲ್ಲಿಕೆಯಾದ ಬಳಿಕ ಮಾಲಿವುಡ್‌ನ(Mollywood) ಕೆಲ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.
ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ.
ಇತ್ತೀಚೆಗೆ ಮಲಯಾಳಂ ನಟಿ ಮಿನು ಮುನೀರ್ (Minu Muneer) ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು ಮಾಡಿದ್ದು, ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುವಾಗ ಮೌಖಿಕ ಮತ್ತು ದೈಹಿಕ ನಿಂದನೆಯನ್ನು ಎದುರಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ನಟಿಯ ಪೋಸ್ಟ್ ನಲ್ಲಿ ಏನಿದೆ?:
“ನಾನು ಅನುಭವಿಸಿದ ದೈಹಿಕ ಮತ್ತು ಮೌಖಿಕ ನಿಂದನೆಯ ಘಟನೆಗಳ ಬಗ್ಗೆ ಬರೆಯುತ್ತಿದ್ದೇನೆ. ನಾನು ಇವರುಗಳ ಕೈಯಲ್ಲಿ ಬಳಲುತ್ತಿದ್ದೆ, ನಟ ಮುಕೇಶ್, ಮಣಿಯನ್ ಪಿಳ್ಳ ರಾಜು, ನಟ ಜಯಸೂರ್ಯ, ಚಂದ್ರಶೇಖರನ್, ಮಲಯಾಳಂ ಚಲನಚಿತ್ರೋದ್ಯಮದ ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು” ಎನ್ನುವವರು ತಮಗೆ ದೈಹಿಕ ಹಾಗೂ ಮೌಖಿಕವಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಅವರು ಫೋಟೋಗಳ ಸಮೇತ ಪೋಸ್ಟ್ ಹಾಕಿ ಆರೋಪಿಸಿದ್ದರು.
ಈ ಬಗ್ಗೆ ನಟ ಜಯಸೂರ್ಯ(Jayasurya) ಅವರು ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದು, ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡಿರುವುದಾಗಿ ಹೇಳಿದ್ದಾರೆ.
ಭಾನುವಾರ (ಸೆ.1 ರಂದು) ನಟ ಜಯಸೂರ್ಯ ಅವರು ತನ್ನ 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
“ಇಂದು ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಎಲ್ಲರಿಗೂ ಧನ್ಯವಾದಗಳು. ನನ್ನ ವೈಯಕ್ತಿಕ ಬದ್ಧತೆಗಳಿಂದಾಗಿ, ನಾನು ನನ್ನ ಕುಟುಂಬ ಕಳೆದ ಒಂದು ತಿಂಗಳಿನಿಂದ ಅಮೆರಿಕದಲ್ಲಿ ಇದ್ದೇವೆ. ಈ ಸಮಯದಲ್ಲಿ ನನ್ನ ವಿರುದ್ಧ ಲೈಂಗಿಕ ಕಿರುಕುಳದ ಎರಡು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದು ನನ್ನನ್ನು, ನನ್ನ ಕುಟುಂಬವನ್ನು ಮತ್ತು ನನ್ನ ಆತ್ಮೀಯರಿಗೆ ತುಂಬಾ ನೋವು ತಂದಿದೆ” ಎಂದು ಹೇಳಿದ್ದಾರೆ.
“ನಾನು ಇದನ್ನು ಕಾನೂನುಬದ್ಧವಾಗಿ ಮುಂದುವರಿಸಲು ನಿರ್ಧರಿಸಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಕಾನೂನು ತಂಡವು ಉಳಿದ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತದೆ. ಆತ್ಮಸಾಕ್ಷಿಯ ಕೊರತೆಯಿರುವ ಯಾರಿಗಾದರೂ ಸುಳ್ಳು ಆರೋಪಗಳನ್ನು ಮಾಡುವುದು ಸುಲಭ. ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಂತೆಯೇ ನೋವಿನಿಂದ ಕೂಡಿದೆ ಎಂದು ಒಬ್ಬರು ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ, ಆದರೆ ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
“ನಾನು ಇಲ್ಲಿ ನನ್ನ ಕೆಲಸ ಮುಗಿಸಿದ ತಕ್ಷಣ ಹಿಂತಿರುಗುತ್ತೇನೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಂದುವರೆಯುತ್ತವೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಈ ಜನ್ಮದಿನವನ್ನು ಅತ್ಯಂತ ನೋವಿನಿಂದ ಮಾಡಲು ಸಹಕರಿಸಿದವರಿಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
ಜಯಸೂರ್ಯ ವಿರುದ್ಧ ಲೈಂಗಿ ಕಿರುಕುಳದ ಆರೋಪದ ಮೇಲೆ ಎರಡು ಎಫ್‌ಐಆರ್ ದಾಖಲಾಗಿದೆ. ಮೊದಲ ಪ್ರಕರಣವನ್ನು ನಟಿ ಮಿನು ಮುನೀರ್ ದಾಖಲಿಸಿದ್ದರೆ, ಎರಡನೆಯದನ್ನು ಆಗಸ್ಟ್ 30 ಶುಕ್ರವಾರ ದಾಖಲಿಸಲಾಗಿದೆ.
ಎರಡನೇ ಎಫ್‌ಐಆರ್ 354, 354A (A1) (I) ಮತ್ತು 354D IPC ಅಡಿಯಲ್ಲಿ ದಾಖಲಾಗಿದ್ದು, ದೂರುದಾರರ ಹೇಳಿಕೆಯನ್ನು ದಾಖಲಿಸಿದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. ಈ ಎಫ್‌ಐಆರ್ ತಿರುವನಂತಪುರದಲ್ಲಿ ದಾಖಲಾಗಿದ್ದು, ತೋಡುಪುಳ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.