Advertisement

ವಿಜೃಂಭಣೆಯ ಸಿಡಿ ಉತ್ಸವ

03:54 PM May 16, 2019 | Team Udayavani |

ಮೊಳಕಾಲ್ಮೂರು: ತಾಲೂಕಿನ ಜನರ ಆರಾಧ್ಯ ದೈವವಾಗಿರುವ ನುಂಕೇಮಲೆ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಿಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

Advertisement

ನುಂಕೇಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನ, ತುಪ್ಪದಮ್ಮ ದೇವಿ, ಹರಳಯ್ಯ, ಮಲ್ಲಿಕಾರ್ಜುನಸ್ವಾಮಿ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊಳಕಾಲ್ಮೂರು ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿನ ಸ್ವಾಮಿಯ ನೂರಾರು ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ನುಂಕೇಮಲೆ ಬೆಟ್ಟದ ಕೆಳಗಿರುವ ಹರಳಯ್ಯಸ್ವಾಮಿ ದೇವಸ್ಥಾನದ ಬಳಿ ಇರುವ ತುಪ್ಪದಮ್ಮ ದೇವಿ ಪಾದಗಟ್ಟೆಗೆ ಆಗಮಿಸಿದರು. ಅಲ್ಲಿ ಬಾಯಿ ಬೀಗವನ್ನು ತೆಗೆದು ಹರಕೆ ಸಮರ್ಪಿಸಿದರು. ಹಲವಾರು ಭಕ್ತರು ತುಪ್ಪದಮ್ಮ ದೇವಿಗೆ ಬೇವಿನ ಉಡುಗೆ ಹರಕೆ ತೀರಿಸಿದರು.

ಸಂಜೆ ಸುಮಾರು 5 ಗಂಟೆ ವೇಳೆಗೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಇದಕ್ಕೂ ಮುನ್ನ ಸಿಡಿ ಉತ್ಸವ ತಿರುಗುವ ಮದು ಮಗನು ಒಂಭತ್ತು ದಿನಗಳವರೆಗೆ ವ್ರತ ಪೂರೈಸಿ ಸಿಡಿ ಉತ್ಸವದಂದು ವಾದ್ಯಮೇಳಗಳೊಂದಿಗೆ

ತುಪ್ಪದಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ. ಇದಾದ ಬಳಿಕ ಸಿದ್ದೇಶ್ವರಸ್ವಾಮಿ ದೇವಸ್ಥಾನದವರೆಗೂ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ಪಾದಗಟ್ಟೆಗೆ ಆಗಮಿಸಿದ. ಅಲ್ಲಿ ಸಿಡಿ ಉತ್ಸವ ಕೈಗೊಳ್ಳುವ ಮದುಮಗನ ಬೆನ್ನಿಗೆ ಕೊಂಡಿಯನ್ನು ಹಾಕಲಾಯಿತು. ವಾದ್ಯ ಮೇಳಗಳೊಂದಿಗೆ ಸಿಡಿ ಕಂಬದ ಬಳಿ ಬಂದು ಬೆಟ್ಟದ ಮೇಲಿರುವ ದೀಪಸ್ತಂಭಕ್ಕೆ ಹಚ್ಚಿರುವ ಜ್ಯೋತಿಯ ದರ್ಶನ ಮಾಡಲಾಯಿತು. ನಂತರ ಅಲಂಕೃತ ಸಿಡಿ ಕಂಬಕ್ಕೆ ಕಟ್ಟಿ ಸಿಡಿ ಉತ್ಸವನ್ನು ಆಚರಿಸಲಾಯಿತು.

ತಾಲೂಕಿನ 33 ಗ್ರಾಮಗಳ ಭಕ್ತರು ಹಾಗೂ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಹಾಗೂ ವಿವಿಧ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದ ರಾಯದುರ್ಗ, ಅನಂತಪುರ, ಕಲ್ಯಾಣದುರ್ಗಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಸಿಡಿ ಉತ್ಸವಕ್ಕೆ ಆಗಮಿಸಿದ್ದರು. ಸಿಡಿ ಕಂಬಕ್ಕೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

Advertisement

ಸಿಡಿ ತಿರುಗುವ ಮದುಮಗನಿಗೆ ಕೊಂಡಿ ಹಾಕಿದ ನಂತರ ಬೆಟ್ಟದಲ್ಲಿರುವ ಹರಳಯ್ಯನ ವಾರಸುದಾರರು ಕೊಂಡಿ ಕಾಣಿಕೆಯನ್ನು ಪಡೆದರು. ಭಕ್ತರು ನುಂಕಪ್ಪ, ಸಿದ್ದೇಶ್ವರ, ತುಪ್ಪದಮ್ಮ ಹಾಗೂ ಹರಳಯ್ಯಸ್ವಾಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಸಿಡಿ ಉತ್ಸವದಲ್ಲಿ ಮಂಗಲ್ನಾಥ್‌ ಸ್ವಾಮೀಜಿ, ಶಾಸಕ ಬಿ. ಶ್ರೀರಾಮುಲು, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್‌, ತಾಪಂ ಸದಸ್ಯ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ಶಿವಣ್ಣ, ಗ್ರಾಪಂ ಉಪಾಧ್ಯಕ್ಷ ನಾಗರಾಜ್‌, ಸದಸ್ಯರಾದ ಲೋಟನಾಥ್‌, ಅಂಜನೇಯ, ಶಂಕರ್‌, ಪಿಡಿಒ ಕರಿಬಸಪ್ಪ, ಮುಖಂಡರಾದ ಚಂದ್ರಶೇಖರ ಗೌಡ, ತಿಪ್ಪಯ್ಯ, ಜಯಪಾಲ್, ಮೀಸೆ ಬೋರಯ್ಯ, ವಿ. ಮಾರನಾಯಕ, ಸೂರಯ್ಯ, ಪರಮೇಶ್ವರಪ್ಪ, ಎಸ್‌.ಒ.ಪಾಲಯ್ಯ, ದೇವರತ್ನ , ಟಿ.ಟಿ. ರವಿಕುಮಾರ್‌, ಎಲ್ಐಸಿ ನಾಗರಾಜ್‌, ಡಿ.ಜಿ. ಮಂಜುನಾಥ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next