Advertisement

ಅಧಿಕಾರಿಗಳಿಗೆ ಜಿಪಂ ಸಿಇಒ ಕ್ಲಾಸ್‌

04:22 PM Jul 17, 2019 | Naveen |

ಮೊಳಕಾಲ್ಮೂರು: ಪಟ್ಟಣದ ತಾಲೂಕು ಪಂಚಾಯತ್‌ ಕಚೇರಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ಕಾರ್ಯವೈಖರಿ ಗಮನಿಸಿ ತರಾಟೆಗೆ ತೆಗದುಕೊಂಡರು.

Advertisement

ಇದಕ್ಕೂ ಮುನ್ನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಗ್ರಾಪಂಗಳ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ| ಶ್ರೀಧರ ಐ. ಬಾರಕೇರ್‌ ಗೈರಾಗಿದ್ದನ್ನು ಕಂಡು ಗರಂ ಆದರು. ನಂತರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಕೆಲಸದ ಬಗ್ಗೆ ಮಾಹಿತಿ ಪಡೆದರು. ತಾಪಂ ಇಒರವರು ಯಾವುದೇ ಸೂಚನೆ ನೀಡದೆ ಗೈರಾಗಿದ್ದಾರೆ. ಹಾಗಾಗಿ ಅವರ ಒಂದು ದಿನದ ವೇತನ ಕಡಿತಗೊಳಿಸುವಂತೆ ಆದೇಶಿಸಿದರು.

ಇದಾದ ಬಳಿಕ ತಾಪಂ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಹಿರೇಕೆರೆಹಳ್ಳಿ ಗ್ರಾಪಂ ಸದಸ್ಯ ಲೋಕೇಶ್‌ ಪಲ್ಲವಿ ಮಾತನಾಡಿ, ಗ್ರಾಮಸ್ಥರ ಮನೆ ಮತ್ತು ನಿವೇಶನಗಳ ಆಸ್ತಿಯನ್ನು ಇ-ಸ್ವತ್ತಿನ ಮೂಲಕ ನೋಂದಾಯಿಸಿಕೊಳ್ಳಲು ಆಗುತ್ತಿಲ್ಲ.

ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವಾದ್ದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಸತ್ಯಭಾಮ, ಜನರಿಗೆ ತೊಂದರೆಯ್ದಾಂತೆ ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ನೇರ‌್ಲಹಳ್ಳಿ ಗ್ರಾಪಂನಲ್ಲಿ ನಡೆಯುವ ನರೇಗಾ ಯೋಜನೆಯ ಕಾಮಗಾರಿಗಳ ಬಿಲ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕೂಡಲೇ ಕಾಮಗಾರಿಗಳ ಬಿಲ್ ನೀಡುವಂತೆ ಗ್ರಾಪಂ ಸದಸ್ಯ ದಾನಸೂರ ನಾಯಕ ಮನವಿ ಮಾಡಿಕೊಂಡರು.

Advertisement

ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ನಿಯಮಾನುಸಾರ ಪರಿಶೀಲಿಸಿ ಬಿಲ್ ಪಾವತಿಸುವಂತೆ ಸೂಚಿಸಲಾಗುವುದೆಂದು ಸಿಇಒ ತಿಳಿಸಿದರು. ತಾಲೂಕಿನ ನಾಗಸಮುದ್ರ ಗ್ರಾಪಂನಲ್ಲಿ ಕೈಗೊಂಡ 14 ನೇ ಹಣಕಾಸು ಯೋಜನೆಯ ಕಾಮಗಾರಿಗಳಿಗೆ ಅನುಮತಿ ನೀಡಬೇಕಾಗಿದೆ. ಹಾಗೆಯೇ ನಾಗಸಮುದ್ರ ಗ್ರಾಮದ ಕೆರೆಯಲ್ಲಿನ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಗ್ರಾಪಂ ಅಧ್ಯಕ್ಷೆ ಮನವಿ ಮಾಡಿಕೊಂಡರು.

ಸಿಇಒ ಸತ್ಯಭಾಮ ಮಾತನಾಡಿ, 14ನೇ ಹಣಕಾಸು ಯೋಜನೆಯ ಕಾಮಗಾರಿಗಳಿಗೆ ಅನುಮತಿಗೆ ಕಡತಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು. ಹಾಗೆಯೇ ಕೆರೆಯ ಹೂಳು ತೆಗೆಯಲು ಅಧಿಕಾರಿಗಳಿಗೆ ಸೂಚಿಸಲಾಗುವುದೆಂದರು. ರಾಯಾಪುರ ಗ್ರಾಮದ ಮುದಯ್ಯ ಮಾತನಾಡಿ, ಪಟ್ಟಣದ ಮೆಟ್ರಕ್‌ಪೂರ್ವ ಶಾಲೆಗಳ ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಪಟ್ಟಣದಲ್ಲಿ ಬಾಲಕರ ಎಸ್‌ಟಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು. ಸಿಇಒ ಅವರು ಜಿಲ್ಲಾ ಎಸ್‌ಟಿ ಇಲಾಖಾಕಾರಿಗೆ ಕರೆ ಮಾಡಿ, ಈ ಭಾಗದಲ್ಲಿ ಎಸ್‌ಟಿ ಸಮುದಾಯ ಹೆಚ್ಚಿರುವುದರಿಂದ ಶಿಕ್ಷಣ ಪಡೆಯಲು ಪ್ರತ್ಯೇಕ ಬಾಲಕರ ಎಸ್‌ಟಿ ಹಾಸ್ಟೆಲ್ ಪ್ರಾರಂಭಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಲೆಕ್ಕ ಪರಿಶೋಧಕ ಹನುಮಂತಪ್ಪ, ನರೇಗಾ ಯೋಜನೆಯ ಮಧುಸೂದನ, ಶಿವಕುಮಾರ್‌, ತಾಪಂ ಸಿಬ್ಬಂದಿಗಳಾದ ಪ್ರದೀಪ್‌, ಗ್ರಾಪಂ ಸದಸ್ಯ ನಜೀರ್‌ ಅಹಮ್ಮದ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next