ಮೊಳಕಾಲ್ಮೂರು: ಭಾರತ ದೇಶದ ನಾಗರಿಕರು ಸಂವಿಧಾನದಡಿ ಕಲ್ಪಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಪಡೆಯುವ ಜೊತೆಗೆ ಮೂಲಭೂತ ಕರ್ತವ್ಯಗಳನ್ನೂ ಪಾಲಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ನಿರ್ಮಲಾ ಕರೆ ನೀಡಿದರು.
ಪಟ್ಟಣದ ಸರ್. ಎಂ.ವಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಮನ್ನಣೆ ಗಳಿಸಿರುವ ಭಾರತದ ಸಂವಿಧಾನವನ್ನು ರಚಿಸಿದ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ವ್ಯಕ್ತಿತ್ವ ಮಾದರಿ. 1950ರ ಜನವರಿ 26 ರಂದು ಸಂವಿಧಾನವನ್ನು ಜಾರಿಗೊಳಿಸಲಾಗಿದೆ. ಇಂತಹ ಶ್ರೇಷ್ಠ ಸಂವಿಧಾನದಡಿಯಲ್ಲಿ ಕಲ್ಪಿಸಿರುವ ಮೂಲಭೂತ ಕರ್ತವ್ಯಗಳನ್ನು ಅರಿತು ಪಾಲಿಸಬೇಕಾಗಿದೆ. ಸಂವಿಧಾನ ಹಲವಾರು ಪ್ರಸ್ತಾವನೆಗಳನ್ನು ಒಳಗೊಂಡಿದ್ದು ಆಡಳಿತಾತ್ಮಕವಾದ ಕಾನೂನುಗಳನ್ನು ಕಲ್ಪಿಸಲಾಗಿದೆ. ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಸಾಂಸ್ಕೃತಿಕ ಮತ್ತು ಶಿಕ್ಷಣದ ಹಕ್ಕು ಸೇರಿದಂತೆ ಹಲವಾರು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕ ಹುಟ್ಟಿದ ಸ್ಥಳ, ಜಾತಿ, ಧರ್ಮ, ಲಿಂಗ, ಭಾಷೆ ಬಗ್ಗೆ ತಾರತಮ್ಯ ಮಾಡದೆ ಉದ್ಯೋಗ ಹಾಗೂ ಹಲವಾರು ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಸಂವಿಧಾನದಡಿ ದೇಶದ ಪ್ರತಿಯೊಬ್ಬ ನಾಗರಿಕರೂ ಸಮಾನರಾಗಿದ್ದಾರೆ. ದೇಶದ ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನ, ರಾಷ್ಟ್ರಗೀತೆಯನ್ನು ಗೌರವಿಸಬೇಕು. ದೇಶದ ಸೈನಿಕರು, ನದಿ, ಗಡಿ, ರಾಷ್ಟ್ರ ನಾಯಕರನ್ನು ಗೌರವದಿಂದ ಕಂಡು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ನ್ಯಾಯವಾದಿ ರಾಜಶೇಖರ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಭಾರಿ ಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ವಕೀಲರಾದ ಎಂ.ಎನ್.ವಿಜಯಲಕ್ಷ್ಮೀ, ವಿನೋದ, ಸುರೇಶ್, ರಾಮಾಂಜನೇಯ, ಅನಂತಮೂರ್ತಿ, ಸಿದ್ದಪ್ಪ, ವೆಂಕಟೇಶ್, ಯರ್ರಿಸ್ವಾಮಿ, ವೀರೇಶ್, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ, ಶಿಕ್ಷಕಿಯರಾದ ಮಂಜುಳಾ, ಸಂಧ್ಯಾ, ರೇಖಾ, ಜಬೀನಾ ತಾಜ್, ಅನುಪಮ, ಮುಜಾಮಿಲ್ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.