ಮೊಳಕಾಲ್ಮೂರು: ಕಳೆದ ಐದು ದಶಕಗಳಿಂದ ಖಾಲಿ ಇರುವ 2.40 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸರ್ಕಾರಿ ನೌಕರರ ಮೇಲಿರುವ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜೆ. ಜಗದೀಶ್ ಒತ್ತಾಯಿಸಿದರು.
ಪಟ್ಟಣದ ಸಾಮರ್ಥ್ಯಸೌಧದಲ್ಲಿ ಸರ್ಕಾರಿ ನೌಕರರ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಳುವ ಸರ್ಕಾರಗಳು ಆರ್ಥಿಕ ಸಂಪನ್ಮೂಲದ ಕೊರತೆ ನೆಪವೊಡ್ಡಿ 1968ರಿಂದಲೂ ಆಡಳಿತ ವ್ಯವಸ್ಥೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಕೆಲಸದ ಒತ್ತಡ ಮತ್ತು ಕಿರುಕುಳ ಸಹಿಸಲಾರದೆ ಮಾನಸಿಕವಾಗಿ ನೊಂದಿದ್ದಾರೆ.
ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ವೃತ್ತಿಯನ್ನೇ ಕೈಬಿಡುವ ಸನ್ನಿವೇಶ ಸೃಷ್ಟಿಯಾಗಿದೆ. ಇಂತಹ ದುಸ್ಥಿತಿಯನ್ನು ಸರ್ಕಾರಗಳು ಮನಗಂಡು ಸರ್ಕಾರಿ ನೌಕರರ ಹಿತರಕ್ಷಣೆಗೆ ಮುಂದಾಗಬೇಕಿದೆ ಎಂದರು. ಕಳೆದ 2006 ರಿಂದ ಜಾರಿಯಾಗಿರುವ ಎನ್ ಪಿಎಸ್ ಎಂಬ ಹೊಸ ಪೆನ್ಷನ್ ಸ್ಕೀಂ ನೌಕರರಿಗೆ ಮಾರಕವಾಗಿದೆ. ಇದರಿಂದ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ. 60 ವರ್ಷ ದುಡಿದರೂ ವೃದ್ಧಾಪ್ಯದಲ್ಲಿ ಕೈಯಲ್ಲಿ ಬಿಡಿಗಾಸಿಲ್ಲದೆ ಬೇರೆಯವರನ್ನು ಬೇಡುವಂತಹ ದುಸ್ಥಿತಿ ಬಂದೊದಗಿದೆ. ನಿವೃತ್ತಿ ನಂತರ ಮಕ್ಕಳು ಮನೆಯಿಂದ ಹೊರ ಹಾಕಿದರೆ ಯಾರೂ ದಿಕ್ಕಿಲ್ಲದಂತಾಗುತ್ತದೆ. ಇಂತಹ ಮಾರಕ ಸ್ಕೀಂ ಅನ್ನು ಕೂಡಲೇ ರದ್ದುಗೊಳಿಸಿ ಯಥಾಸ್ಥಿತಿ ಕಾಯಬೇಕು.
1998ರ ನಂತರ ಕೃಪಾಂಕದಡಿ ನೇಮಕವಾಗಿರುವ ನೌಕರರ ಸೇವಾ ಹಿರಿತನವನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ಜನರ ಸೇವೆಯೇ ಜನಾರ್ದನ ಸೇವೆ ಎಂದು ಶ್ರಮಿಸುತ್ತಿರುವ ನೌಕರರ ಆಶೋತ್ತರಗಳನ್ನು ಕೂಡಲೇ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಸಂಘಟನೆಗೆ ಒತ್ತು ನೀಡಬೇಕಿದೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ನೌಕರರೂ ಒಗ್ಗೂಡಿ ಸಂಘದ ಅಭಿವೃದ್ಧಿ ಮತ್ತು ನೌಕರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಘಟಿತರಾಗಬೇಕೆಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಡಿ. ಚಿದಾನಂದಪ್ಪ ಮಾತನಾಡಿ ನೌಕರರ ಸಮಸ್ಯೆಗಳ ಬಗ್ಗೆ ಕುಳಿತು ಚರ್ಚಿಸಲು ಒಂದು ಕಚೇರಿಯ ಅಗತ್ಯತೆ ಇತ್ತು. ಆ ಬೇಡಿಕೆ ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜೆ.ಎಂ. ಸಿದ್ದೇಶ್, ಉಪಾಧ್ಯಕ್ಷ ವೀರಣ್ಣ, ಖಜಾಂಚಿ ವೀರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ.ಎಚ್. ಸಣ್ಣಯಲ್ಲಪ್ಪ, ತಾಲೂಕು ಅಧ್ಯಕ್ಷ ಡಿ.ಎಸ್. ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಎಂ. ಬಸವರಾಜ್, ಪ್ರಾಂಶುಪಾಲ ಬಿ.ಎನ್. ತಿಪ್ಪೇಸ್ವಾಮಿ, ನೌಕರ ಸಂಘದ ಪದಾಧಿಕಾರಿಗಳಾದ ಎಂ. ಮಲ್ಲಿಕಾರ್ಜುನ, ಟಿ. ತಿಮ್ಮೇಶ್, ಎಸ್.ಟಿ. ಕೃಷ್ಣಮೂರ್ತಿ, ಕಲ್ಲೇಶಪ್ಪ, ಬೊಮ್ಮಣ್ಣ, ಜಂಬುನಾಥ, ಚಿತ್ತಯ್ಯ, ರಾಮಾಂಜನೇಯ, ಜಂಬುನಾಥ, ಪೆನ್ನಯ್ಯ, ಲಕ್ಷ್ಮೀ, ವಿಜಯಲಕ್ಷ್ಮೀ, ಲೀಲಾವತಿ ಹಾಗೂ ವಿವಿಧ ಇಲಾಖೆಗಳ ನೌಕರರು ಭಾಗವಹಿಸಿದ್ದರು.