Advertisement

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

03:50 PM Sep 13, 2019 | Naveen |

ಮೊಳಕಾಲ್ಮೂರು: ತಾಲೂಕಿನ ಸಮಗ್ರ ಅಭಿವೃದ್ಧಿ ಪರಿಶೀಲನೆಯ ಸಾಮಾನ್ಯ ಸಭೆಗೆ ಗೈರಾದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್‌ ಒತ್ತಾಯಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಬಹುತೇಕ ಸದಸ್ಯರು ರೇಷ್ಮೆ ವೀರೇಶ್‌ ಮಾತಿಗೆ ಧ್ವನಿಗೂಡಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಪವನ್‌ ಮಾತನಾಡಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸಿ ಪೈಪ್‌ಲೈನ್‌ ಕಾಮಗಾರಿ ಕೈಗೊಂಡು ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಮಧ್ಯಪ್ರವೇಶಿಸಿದ ಸದಸ್ಯರಾದ ಟಿ. ರೇವಣ್ಣ, ನರೇಂದ್ರಬಾಬು, ಎಸ್‌. ತಿಪ್ಪೇಸ್ವಾಮಿ , ಎ.ಕೆ. ಮಂಜುನಾಥ ಮತ್ತಿತರರು ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ತಾಪಂ ಇಒ ಡಾ| ಶ್ರೀಧರ ಐ. ಬಾರಕೇರ್‌ ಮಾತನಾಡಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೊಳವೆಬಾವಿ ಕೊರೆಸಲಾಗಿದೆ. ಆದರ್ಶ ಶಾಲೆ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ತಾಲೂಕಿನಲ್ಲಿ ಉತ್ತಮ ಮಳೆಯಾಗದ ಕಾರಣ ಅಂತರ್ಜಲ ಕುಸಿತದಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಟ್ಯಾಂಕರ್‌ ನೀರು ಪೂರೈಕೆ ಮಾಡುವುದಾಗಿ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮೀಪ್ರಸನ್ನ ಮಾತನಾಡಿ ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಶೇಂಗಾ ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗುತ್ತಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲು ವರದಿ ನೀಡಲಾಗುವುದೆಂದು ತಿಳಿಸಿದರು. ತಾಪಂ ಸದಸ್ಯ ಟಿ.ರೇವಣ್ಣ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಬೆಳೆ ಹಾನಿಯಾಗಿರುವದರಿಂದ ಫಸಲ್ ಭಿಮಾ ಯೋಜನೆಯಲ್ಲಿ ಬೆಳೆ ಪರಿಹಾರ ಮತ್ತು ವಿಮೆ ನೀಡಲು ಸರಿಯಾಗಿ ಬೆಳೆ ಸಮೀಕ್ಷೆ ಮಾಡಿಲ್ಲ. ಯಾವುದೋ ಒಂದು ಸರ್ವೆ ನಂಬರಿನ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಿ ಇಡೀ ತಾಲೂಕಿನ ಬೆಳೆ ಉತ್ತಮವಾಗಿದೆ ಎಂದು ವರದಿ ನೀಡಿದ್ದರಿಂದ ಬಹುತೇಕ ರೈತರಿಗೆ ಬೆಳೆ ಪರಿಹಾರ ಮತ್ತು ವಿಮೆಯ ಸೌಲಭ್ಯ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅವೈಜ್ಞಾನಿಕ ನಿಯಮಗಳ ಬದಲಾಗಿ ಸರಿಯಾದ ಕ್ರಮದಿಂದ ಬೆಳೆ ಸಮೀಕ್ಷೆ ಮಾಡಬೇಕೆಂದು ಸೂಚನೆ ನೀಡಿದರು.

Advertisement

ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಲೋಕೇಶ್‌ ಮಾತನಾಡಿ, ತಾಲೂಕಿನಲ್ಲಿ 2016ನೇ ಸಾಲಿನಲ್ಲಿ ಒಣಗಿದ ತೆಂಗಿನ ಮರಗಳ ಸಮೀಕ್ಷೆ ನಡೆಸಲಾಗಿತ್ತು. 2,578 ತೆಂಗಿನ ಮರಗಳಿಗೆ ಹಾನಿಯಾಗಿದ್ದು, ಒಂದು ಮರಕ್ಕೆ 400 ರೂ.ನಂತೆ ಒಟ್ಟು 47 ಫಲಾನುಭವಿಗಳಿಗೆ ಪರಿಹಾರದ ಹಣ ಬಂದಿದೆ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದೆಂದು ತಿಳಿಸಿದರು. ತಾಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ತೆಂಗಿನ ಮರಗಳು ಹಾನಿಯಾಗಿದ್ದು, ಸರಿಯಾಗಿ ಸಮೀಕ್ಷೆ ನಡೆಸಿ ಸರಿಯಾದ ಪರಿಹಾರ ಕಲ್ಪಿಸಬೇಕೆಂದು ಸದಸ್ಯ ನರೇಂದ್ರಬಾಬು ತಾಕೀತು ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಸೋಮಶೇಖರ್‌ ಮಾತನಾಡಿ, ಶಿಕ್ಷಕರ ವರ್ಗಾವಣೆಯಿಂದ ತಾಲೂಕಿಗೆ ಸುಮಾರು 34 ಶಿಕ್ಷಕರು ಬಂದಿದ್ದಾರೆ. 13 ಶಿಕ್ಷಕರು ಹೊರ ತಾಲೂಕುಗಳಿಗೆ ಹೋಗಿದ್ದಾರೆ. ಶಿಕ್ಷಕರ ಕೊರತೆ ಇರುವ ಕಡೆ ಅತಿತಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಎಚ್. ಲತಮ್ಮ, ಉಪಾಧ್ಯಕ್ಷೆ ತಿಮ್ಮಕ್ಕ, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next