Advertisement

ಕುಷ್ಟಗಿ: ಮುಸ್ಲಿಂ ಸಮುದಾಯವೇ ಇಲ್ಲದ ಊರಲ್ಲೂ ಮೋಹರಂ ಆಚರಣೆ ..!

10:33 AM Aug 09, 2022 | Team Udayavani |

ಕುಷ್ಟಗಿ: ಪಟ್ಟಣದಿಂದ 5 ಕಿ.ಮೀ. ದೂರದ ಕುರಬನಾಳ ಗ್ರಾಮದಲ್ಲಿ ಮೋಹರಂ ಹಬ್ಬದ ಹಿನ್ನೆಲೆ ಹಲವು ವೈಶಿಷ್ಟತೆಗಳಿಂದ ಗಮನ ಸೆಳೆದಿದೆ. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬಗಳಿಲ್ಲ. ಆದರೂ ಕಳೆದ ನಾಲ್ಕು ದಶಕಗಳಿಂದ ಮೋಹರಂ ಹಬ್ಬ ಆಚರಿಸಲಾಗುತ್ತಿದೆ.

Advertisement

ಹೌದು… ಕುರಬನಾಳ ಗ್ರಾಮದಲ್ಲಿ ಮುಸ್ಲಿಂ ಸಮುದಾಯ ಹೊರತುಪಡಿಸಿ ಎಲ್ಲಾ ಸಮುದಾಯದವರು ಇದ್ದಾರೆ. ಆದಾಗ್ಯೂ ಪ್ರತಿ ವರ್ಷ ಮೋಹರಂ ಹಬ್ಬವನ್ನು ಹಿಂದುಗಳು ತಮ್ಮ ಹಬ್ಬದಂತೆ ಆಚರಿಸಲಾಗುತ್ತಿದ್ದು, ಮೋಹರಂ ಸಂದರ್ಬದಲ್ಲಿ ಅಲಾಯಿ ದೇವರುಗಳನ್ನು ಹಿಂದೂಗಳೇ ಹಿಡಿದು ದೇವರ ಸವಾರಿ ಮಾಡುತ್ತಾರೆ. ಆದರೆ ಈ ಹಬ್ಬದಲ್ಲಿ ಅಲಾಯಿ ದೇವರಿಗೆ ಕೆಂಪು ಸಕ್ಕರೆ, ಗುಗ್ಗಳ ದೂಪ ಓದಿಸುವವರು ಮುಸ್ಲಿಂ ಸಮುದಾಯದವರಾಗಿದ್ದು, ಅವರು ಪಕ್ಕದ ಕಂದಕೂರ ಗ್ರಾಮದ ರಾಜೇಸಾಬ್ ದೋಟಿಹಾಳ ಅವರು ಹತ್ತು ದಿನಗಳ ಹಬ್ಬದ ಅಲಾಯಿ ದೇವರ ಓದಿಕೆ ಓದಿಸುವ ಸಂಪ್ರದಾಯ ಮುಂದುವರಿಸಿದ್ದಾರೆ.

ಅಲಾಯಿ ದೇವರುಗಳಾದ ಹಸನ್,  ಹುಸೇನ್, ಯಮನೂರು, ಬೀಬಿ ಪಾತಿಮಾ, ದಾವಲ್ ಮಲಿಕ್, ಹುಸೇನ ಭಾಷಾ ಈ ದೇವರುಗಳನ್ನು ಬಸವರಾಜ್ ಬಿ ಬಡಿಗೇರ, ಯಮನೂರಪ್ಪ ತೆಮ್ಮಿನಾಳ, ಮೌನೇಶ ವಿಶ್ವಕರ್ಮ,ಬಸವರಾಜ್ ತರಲಕಟ್ಟಿ, ಶ್ರೀ ಶೈಲ ತರಲಕಟ್ಟಿ, ರಮೇಶ ಜೋಲಕಟ್ಟಿ ಇವರುಗಳು ಹಿಡಿದು ಸವಾರಿಯ ನೇತೃತ್ವ ವಹಿಸುವರು. ಮೋಹರಂ ಆರಂಭದ ಅಲಾಯಿ ಕುಣಿಗೆ ಗುದ್ದಲಿ ಬೀಳುವ ದಿನದಿಂದ ಕತಲ್ ರಾತ್ರಿ ಆಚರಣೆ ಹಾಗೂ ಮೊಹರಂ ಕಡೆಯ ದಿನದ ದೇವರು ಹೊಳೆ ಹೋಗುವವರೆಗೂ ಹಿಂದೂಗಳೇ ಸಾಮರಸ್ಯದಿಂದ ಆಚರಿಸಿಕೊಂಡು ಬಂದಿದ್ದಾರೆ.

ಹಿನ್ನೆಲೆ ಏನು? ಕಳೆದ ‌ನಾಲ್ಕು ದಶಕಗಳ ಹಿಂದೆ ಕುರಬನಾಳ ಸೀಮಾದ ಹಳ್ಳದಲ್ಲಿ ಅಲಾಯಿ ದೇವರ ಪಂಜಾ ಸಿಕ್ಕಿತ್ತು. ಆಗಿನಿಂದ ಮುಸ್ಲಿಂ ಸಮುದಾಯ ಇಲ್ಲದ ಈ ಊರಿನಲ್ಲಿ ನಮ್ಮೂರ ಮೋಹರಂ ಹಬ್ಬದಂತೆ ಸರ್ವ ಸಮುದಾಯದವರು ಶ್ರದ್ದಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದಾರೆ. ರಮೇಶ್ ಬಿ ಕುರ್ನಾಳ್ ಮಲ್ಲಣ್ಣ ಸಾಹುಕಾರ, ನಿಂಗಪ್ಪ ಬೆಣಕಲ್ಲ್ ಶರಣಪ್ಪ ತಳವಾರ, ಶರಣಪ್ಪ ಪವಡೆಪ್ಪನವರ್, ಶರಣಪ್ಪ ನವಲಹಳ್ಳಿ, ಮಲ್ಲಪ್ಪ ಗುಮಗೇರಿ, ದೇವೇಂದ್ರ ಗೌಡ ಮಾಲಿಪಾಟೀಲ, ಯಮನಪ್ಪ ಪವಡೆಪ್ಪನವರು, ಫಕೀರಪ್ಪ ತರಲಕಟ್ಟಿ, ಬೀಮಪ್ಪ ಪವಡೆಪ್ಪನವರ್ ಫಕೀರಪ್ಪ ಸಾಹುಕಾರ, ಶಂಕ್ರಪ್ಪ ಪ್ಯಾಟೇನ್ ನೇತೃತ್ವ ವಹಿಸುವರು.

ಈ ಕುರಿತು ರಮೇಶ ಕುರ್ನಾಳ ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ, ಮುಸ್ಲಿಂ ಸಮುದಾಯ ಇಲ್ಲದ ನಮ್ಮೂರಲ್ಲಿ ಹಿಂದೂಗಳೇ‌‌ ಮುಂದೆ ‌ನಿಂತು ಮಸೀದಿ ನಿರ್ಮಿಸಿದ್ದಾರೆ. ಮೋಹರಂ‌ ನಮ್ಮೂರ ಹಬ್ಬವಾಗಿದ್ದು ಭಕ್ತಾದಿಗಳು ಅಲಾಯಿ ದೇವರಿಗೆ ಬೆಳ್ಳಿ ಪಂಜಾ, ಬೆಳ್ಳಿ ಕುದರೆ ಸಮರ್ಪಿಸುತ್ತಾರೆ.‌ ಅಲಾಯಿ ದೇವರ ಓದಿಕಿ ಓದಿಸುವ ಮುಸ್ಲಿಂ ಕುಟುಂಬಕ್ಕೆ ಬೆಳೆಯ ರಾಶಿ ಸಂದರ್ಭದಲ್ಲಿ ರಾಶಿ ಖಣದಲ್ಲಿ ಧಾನ್ಯಗಳನ್ನು ಸಮರ್ಪಿಸುವ ಸಂಪ್ರದಾಯ ಮುಂದುವರೆದಿದೆ ಎಂದರು.

Advertisement

-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next