Advertisement

ಆರ್‌.ಎಸ್‌.ಎಸ್‌.ಗೆ ಯಾರೂ ಅಸ್ಪೃಶ್ಯರಲ್ಲ : ಮೋಹನ್‌ ಭಾಗವತ್‌

08:40 AM Jun 08, 2018 | Karthik A |

ನಾಗ್ಪುರ: ಇಡೀ ಸಮಾಜವನ್ನು ಒಂದುಗೂಡಿಸುವುದೇ ನಮ್ಮ ಸಂಘಟನೆಯ ಬಯಕೆಯಾಗಿದೆ. ಆರ್‌.ಎಸ್‌.ಎಸ್‌.ಗೆ ಯಾರೂ ಹೊರಗಿನವರಲ್ಲ.’ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪಾಲ್ಗೊಳ್ಳುವಿಕೆ ಕಾಂಗ್ರೆಸ್‌ ವಲಯದಲ್ಲಿ ಅಸಮಾಧಾನ ಮೂಡಿಸಿರುವ ನಡುವೆಯೇ, ನಾಗ್ಪುರದಲ್ಲಿ ನಡೆದ ಆರೆಸ್ಸೆಸ್‌ ನ ಕಾರ್ಯಕ್ರಮದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಈ ಮಾತುಗಳನ್ನಾಡಿದ್ದಾರೆ.

Advertisement

ಪ್ರಣವ್‌ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಉಂಟಾದ ವಿವಾದದ ಕುರಿತು ಪ್ರಸ್ತಾಪಿಸಿದ ಭಾಗವತ್‌, ‘ಈ ವಿವಾದವು ಅರ್ಥಹೀನ ಚರ್ಚೆಯಾಗಿದೆ. ಮುಖರ್ಜಿ ಅವರೊಬ್ಬ ಮೇಧಾವಿ ಹಾಗೂ ಅನುಭವಿ. ಗಣ್ಯರನ್ನು ಆಹ್ವಾನಿಸುವುದು ಆರೆಸ್ಸೆಸ್‌ ನ ಸಂಸ್ಕೃತಿಯಾಗಿದೆ. ಸಂಘವು ಪ್ರತಿವರ್ಷವೂ ಬೇರೆ ಬೇರೆ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ,’ ಎಂದರು. ಜತೆಗೆ, ಈ ಕಾರ್ಯಕ್ರಮದ ಬಳಿಕ ಮುಖರ್ಜಿ ಅವರು ಅವರಾಗಿಯೇ ಉಳಿಯುತ್ತಾರೆ, ಸಂಘವು ಸಂಘವಾಗಿಯೇ ಉಳಿಯುತ್ತದೆ ಎಂದೂ ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಪುತ್ರ ಸುನೀಲ್‌ ಶಾಸ್ತ್ರಿ, ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ಸಂಬಂಧಿ ಅರ್ದೆಂದು ಬೋಸ್‌, ಅವರ ಪತ್ನಿ ಮತ್ತು ಮಗನೂ ಭಾಗವಹಿಸಿದ್ದಾರೆ ಎಂದೂ ಹೇಳಿದರು ಭಾಗವತ್‌.

ಎಲ್ಲರೂ ಭಾರತಾಂಬೆಯ ಮಕ್ಕಳು: “ಭಾರತದಲ್ಲಿ ಹುಟ್ಟಿದವರೆಲ್ಲರೂ ಭಾರತೀಯರೇ. ನಮಗೆ ಯಾವ ಭಾರತೀಯನೂ ಅಸ್ಪೃಶ್ಯನಲ್ಲ. ಆರೆಸ್ಸೆಸ್‌ ಕೇವಲ ಹಿಂದೂಗಳಿಗಷ್ಟೇ ಇರುವಂಥದ್ದೂ ಅಲ್ಲ. ಜನರಲ್ಲಿ ಭಿನ್ನ ಭಿನ್ನವಾದ ಅಭಿಪ್ರಾಯಗಳು ಇರಬಹುದು. ಆದರೆ, ಅವರೆಲ್ಲರೂ ಭಾರತ ಮಾತೆಯ ಮಕ್ಕಳು. ಆರೆಸ್ಸೆಸ್‌ ನ ಸ್ಥಾಪಕ ಸರಸಂಘ ಚಾಲಕರಾದ ಹೆಡಗೇವಾರ್‌ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಅವರು ಸಮಾಜಕ್ಕೆ ಏಕತೆಯ ಸಂದೇಶ ನೀಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಭಿನ್ನ ಸಿದ್ಧಾಂತಗಳುಳ್ಳವರೂ ಒಗ್ಗಟ್ಟಾಗಿ ಹೋರಾಡಿದ್ದರು’ ಎಂಬುದನ್ನೂ ಭಾಗವತ್‌ ಸ್ಮರಿಸಿದರು. ಜತೆಗೆ, ಎಲ್ಲರೂ ರಾಜಕೀಯ ಅಭಿಪ್ರಾಯ ಹೊಂದಿರಬೇಕು. ಆದರೆ, ವಿರೋಧ ಮಾಡುವಂಥ ಅಭ್ಯಾಸಕ್ಕೆ ಮಿತಿ ಇರ ಬೇಕು ಎಂದರು. ಇದೇ ವೇಳೆ, ಅನಿಯಂತ್ರಿತ ಸಾಮರ್ಥ್ಯ ಮತ್ತು ಅಧಿಕಾರವು ಸಮಾಜಕ್ಕೆ ಅಪಾಯಕಾರಿ ಎಂದ ಭಾಗವತ್‌, “ಸರಕಾರ ಸಾಕಷ್ಟನ್ನು ಮಾಡಬಹುದು, ಆದರೆ, ಎಲ್ಲವನ್ನೂ ಮಾಡಲಾಗದು. ನಾವೆಲ್ಲರೂ ಪ್ರಜಾಸತ್ತಾತ್ಮಕ ಮನಸ್ಥಿತಿ ಹೊಂದಿರಬೇಕು’ ಎಂದರು. 

ಸೋನಿಯಾ ಸೂಚನೆ ಮೇರೆಗೆ ಟ್ವೀಟ್‌?
‘ನಾನು ಪ್ರಣವ್‌ದಾ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ’. ಬುಧವಾರ ರಾತ್ರಿ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಅವರು ಈ ರೀತಿ ಟ್ವೀಟ್‌ ಮಾಡಿದ್ದರು. ಹೀಗೆ ಒಂದು ಸಾಲಿನ ಟ್ವೀಟ್‌ ಮಾಡಲು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ. ಇದೇ ವೇಳೆ ಕೇಂದ್ರದ ಮಾಜಿ ಸಚಿವ ಆನಂದ ಶರ್ಮಾ ಕೂಡ ಟ್ವೀಟ್‌ ಮಾಡಿದ್ದು, ‘ಹಿರಿಯರಾಗಿರುವ ಪ್ರಣವ್‌ ದಾ ಆರ್‌.ಎಸ್‌.ಎಸ್‌.ನ ಕೇಂದ್ರ ಕಚೇರಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಲಕ್ಷಾಂತರ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮತ್ತು ಬಹುತ್ವದಲ್ಲಿ ನಂಬಿಕೆ ಇರಿಸಿದವರಿಗೆ ಆಘಾತ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಮತ್ತೂಂದು ಟ್ವೀಟ್‌ನಲ್ಲಿ “ಕೇಳುವಂಥ ವ್ಯಕ್ತಿಗಳು ಇದ್ದರೆ, ಬದಲಾವಣೆಗೆ ತೆರೆದುಕೊಳ್ಳಲು ಮತ್ತು ಒಪ್ಪಿಕೊಳ್ಳುವವರಿದ್ದರೆ ಮಾತ್ರ ಮಾತುಕತೆಗೆ ಅವಕಾಶ ಸಾಧ್ಯ. ಆದರೆ ಆರೆಸ್ಸೆಸ್‌ ಇಂಥ ವ್ಯವಸ್ಥೆಯಿಂದ ಬಹಳ ದೂರವಿದೆ’ ಎಂದೂ ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ ನಿಂದ ಟ್ವೀಟ್‌ ಅಭಿಯಾನ
ಅತ್ತ ಆರೆಸ್ಸೆಸ್‌ ಕಾರ್ಯಕ್ರಮದಲ್ಲಿ ಪ್ರಣವ್‌ ಪಾಲ್ಗೊಳ್ಳುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆರೆಸ್ಸೆಸ್‌ ವಿರುದ್ಧ ಕಾಂಗ್ರೆಸ್‌ ಟ್ವೀಟ್‌ ಅಭಿಯಾನವನ್ನೇ ನಡೆಸಿತು. ‘ಆರೆಸ್ಸೆಸ್‌ ಫಾರ್‌ ಡಮ್ಮೀಸ್‌’ ಎಂಬ ಶೀರ್ಷಿಕೆಯುಳ್ಳ ವಿಡಿಯೋವೊಂದನ್ನು ಪೋಸ್ಟ್‌ ಮಾಡಲಾಯಿತು. ಜತೆಗೆ, ಸರಣಿ ಟ್ವೀಟ್‌ಗಳನ್ನೂ ಅಪ್‌ಲೋಡ್‌ ಮಾಡಲಾಯಿತು. ‘ಆರೆಸ್ಸೆಸ್‌ ಸ್ಥಾಪಕ ಹೆಡಗೇವಾರ್‌ ಅವರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಡಿ ಎಂದು ಸಂಘಕ್ಕೆ ಸೂಚಿಸಿದ್ದರು, ಬ್ರಿಟಿಷ್‌ ಸಿವಿಕ್‌ ಗಾರ್ಡ್‌ಗೆ ಸೇರುವಂತೆ ಸದಸ್ಯರಿಗೆ ಸಂಘ ಉತ್ತೇಜನ ನೀಡಿತ್ತು, ಆರೆಸ್ಸೆಸ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ ಇದ್ದುದನ್ನು ಬ್ರಿಟಿಷರು ಶ್ಲಾ ಸಿದ್ದರು, ಸಂಘವು ನಮ್ಮ ರಾಷ್ಟ್ರಧ್ವಜಕ್ಕೆ ವಿರೋಧ ವ್ಯಕ್ತಪಡಿಸಿತ್ತು’ ಎಂದೆಲ್ಲ ವಿಡಿಯೋದಲ್ಲಿತ್ತು ಎಂದು ಸಿಎನ್‌ಎನ್‌ ನ್ಯೂಸ್‌ 18 ವರದಿ ಮಾಡಿತು.

Advertisement

ಪ್ರಣವ್‌ ಭಾಷಣ ನಾನು ಶಾಲೆಯಲ್ಲಿ ಕಲಿತ ಚರಿತ್ರೆ ಪಠ್ಯ ನೆನಪಿಸಿತು. ಮತ್ತೂಮ್ಮೆ ನನ್ನ ಪಠ್ಯ ಪುನರಾವರ್ತಿಸಿಕೊಳ್ಳಲು ಅನುವು ಮಾಡಿದ್ದಕ್ಕೆ ಧನ್ಯವಾದ. 
– ದ ಟ್ರಾವೆಲಿಂಗ್‌ ಪತ್ರಕಾರ್‌

ಶರ್ಮಿಷ್ಠಾ ಅವರೇ, ನಿಮ್ಮ ತಂದೆಯ ಮಾತುಗಳನ್ನು ಕೇಳಿದಿರಾ? ಇಟಲಿ ಮಹಿಳೆಯ ಕೃಪೆ ಗಳಿಸಲು ನೀವು ನಿಮ್ಮ ತಂದೆಯವರನ್ನು ಬೈದಿರಲ್ಲವೇ? ನಿಮ್ಮ ತಾಯಿ ಆತ್ಮ ನಿಮ್ಮ ಈ ತಪ್ಪಿಗೆ ಪರಿತಪಿಸುತ್ತಿರಬಹುದು.
– ಅರ್ಚನಾ ದ್ವಿವೇದಿ

ಭಾಗವತ್‌ ರದ್ದು ಹಿಂದಿ ಭಾಷಣ, ಪ್ರಣವ್‌ ರದ್ದು ಇಂಗ್ಲಿಷ್‌ ಭಾಷಣ ಎಂಬುದು ಬಿಟ್ಟರೆ, ಅವರಿಬ್ಬರು ಹೇಳಿದ ವಿಚಾರಗಳಲ್ಲಿ ವ್ಯತ್ಯಾಸವೇನಿರಲಿಲ್ಲ. ಗೊಂದಲ ಮಾಡಬೇಡಿ. 
– ಸುಹೇಲ್‌ ಸೇಠ್

Advertisement

Udayavani is now on Telegram. Click here to join our channel and stay updated with the latest news.

Next