Advertisement

ಸೌದಿ ಯುವರಾಜನ ಭೇಟಿ ಸಂಬಂಧ ಸಂವರ್ಧನೆ

12:30 AM Feb 21, 2019 | Team Udayavani |

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಭೇಟಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಪುಲ್ವಾಮದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ 44 ಯೋಧರು ಹುತಾತ್ಮರಾದ ಸಂದರ್ಭದಲ್ಲಿಯೇ ಯುವರಾಜ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬರುವ ಮೊದಲು ದಾಳಿ ನಡೆದ ಬೆನ್ನಿಗೆ ಅವರು ಪಾಕಿಸ್ತಾನಕ್ಕೆ ಭೇಟಿಯಿತ್ತಿದ್ದಾರೆ ಹಾಗೂ ಆರ್ಥಿಕವಾಗಿ ಅಧೋಗತಿಗಿಳಿದಿರುವ ಆ ದೇಶಕ್ಕೆ 20 ಶತಕೋಟಿ ಡಾಲರ್‌ ನೆರವನ್ನೂ ಘೋಷಿಸಿದ್ದಾರೆ. ಈ ಕಾರಣಕ್ಕೆ ಸಲ್ಮಾನ್‌ ಭೇಟಿ ತುಸು ವಿವಾದಕ್ಕೂ ಕಾರಣವಾಗಿದೆ. 

Advertisement

ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಮತ್ತು ಪಾಕ್‌ ಮಾತ್ರವಲ್ಲದೆ ಚೀನಾ, ಮಲೇಶ್ಯಾ ಮತ್ತು ಇಂಡೋನೇಶ್ಯಾ ದೇಶಗಳಿಗೂ ಭೇಟಿ ನೀಡಿದ್ದಾರೆ. ಪಂಚದೇಶ ಪ್ರವಾಸದ ಕೊನೆಯ ಚರಣದಲ್ಲಿ ಅವರು ಭಾರತದಲ್ಲಿದ್ದಾರೆ. ಅವರನ್ನು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಪಾಕಿಸ್ತಾನದಿಂದ ನೇರವಾಗಿ ಹೊಸದಿಲ್ಲಿಗೆ ಬರುವುದನ್ನು ಆಕ್ಷೇಪಿಸಿದ ಕಾರಣ ಭಾರತದ ಭಾವನೆಗೆ ಬೆಲೆಕೊಟ್ಟು ಯುವರಾಜ ಇಸ್ಲಾಮಾಬಾದ್‌ನಿಂದ ತನ್ನ ದೇಶಕ್ಕೆ ತೆರಳಿ ಅಲ್ಲಿಂದ ಭಾರತಕ್ಕಾಗಿಮಿಸಿದ್ದಾರೆ. ಅವರ ಈ ನಡೆ ಭಾರತಕ್ಕೆ ರಿಯಾಧ್‌ ಎಷ್ಟು ಪ್ರಾಮುಖ್ಯತೆ ನೀಡಿದೆ ಎನ್ನುವುದನ್ನು ತಿಳಿಸುತ್ತದೆ. 

ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯ ನಡುವಿನ ಸಂಬಂಧ ಬಹಳ ನಿಕಟವಾಗಿದೆ. 2016ರಲ್ಲಿ ಮೋದಿ ಸೌದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತೆ, ಆರ್ಥಿಕತೆ ಸೇರಿ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಇದರ ಲಾಭ ಎರಡೂ ದೇಶಗಳಿಗೆ ಆಗಿದೆ. ಸೌದಿ ಅರೇಬಿಯ ಜತೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಂಡಿರುವುದರಿಂದ ಕೆಲವು ಆರೋಪಿಗಳ ಹಸ್ತಾಂತರ ಸಾಧ್ಯವಾಗಿದೆ. 

ಆದರೂ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಭಾರೀ ಮೊತ್ತದ ಆರ್ಥಿಕ ನೆರವು ನೀಡಿರುವುದು ಭಾರತೀಯರ ಪಾಲಿಗೆ ತುಸು ನಿರಾಶದಾಯಕ ಸುದ್ದಿಯಾಗಿತ್ತು. ಆದರೆ ಈ ನೆರವು ಆ ದೇಶದ ಆರ್ಥಿಕ ಚೇತರಿಕೆಗೆ ಹೊರತು ಭಯೋತ್ಪಾದನೆ ಪ್ರಾಯೋಜನೆಗೆ ಅಲ್ಲ ಎನ್ನುವುದನ್ನು ಯುವರಾಜ ಸ್ಪಷ್ಟಪಡಿಸಿದ್ದಾರೆ. 

ಉಭಯ ನಾಯಕರ ಇಂದಿನ ಮಾತುಕತೆಯಲ್ಲಿ ಭಯೋತ್ಪಾದನೆ ಮತ್ತು ವಾಣಿಜ್ಯ ವಿಷಯಗಳೇ ಪ್ರಾಮುಖ್ಯತೆ ಪಡೆದಿದ್ದವು. ನೇರವಾಗಿ ಪಾಕಿಸ್ತಾನದ ಹೆಸರು ಉಲ್ಲೇಖೀಸದಿದ್ದರೂ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಯೋತ್ಪಾದನೆಯನ್ನು ಒಂದು “ಪೀಡೆ’ ಎಂದು ಬಣ್ಣಿಸಿದ್ದು ಅದರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆಯ ಮೇಲೆಯೇ ಮಾತನಾಡಿದ ಮೋದಿ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳ ಮೇಲೆ ಅಂತಾರಾಷ್ಟ್ರೀಯ ಒತ್ತಡ ಇನ್ನಷ್ಟು ಹೆಚ್ಚಾಗಬೇಕು ಎಂದಿದ್ದಾರೆ. ಈ ಮೂಲಕ ಇಬ್ಬರೂ ಪರೋಕ್ಷವಾಗಿ ಪಾಕಿಸ್ತಾನಕ್ಕೊಂದು ಎಚ್ಚರಿಕೆಯನ್ನು ನೀಡಿದ್ದಾರೆ. 

Advertisement

ಈ ಸಂದರ್ಭದಲ್ಲಿ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ವಸತಿ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಐದು ಒಪ್ಪಂದಗಳಿಗೆ ಸೌದಿ ಅರೇಬಿಯ ಅಂಕಿತ ಹಾಕಿದೆ. ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟಕ್ಕೆ 73ನೇ ದೇಶವಾಗಿ ಸೌದಿ ಸೇರ್ಪಡೆಯಾಗಿರುವುದು ಈ ಸಂದರ್ಭದಲ್ಲಾಗಿರುವ ಇನ್ನೊಂದು ಮಹತ್ವದ ಬೆಳವಣಿಗೆ. ಭಾರತದ ಇ-ವಿಸಾ ಸೌಲಭ್ಯವನ್ನು ಸೌದಿ ಅರೇಬಿಯಾದ ಪ್ರಜೆಗಳಿಗೂ ವಿಸ್ತರಿಸಲಾಗಿದ್ದು, ಹೀಗೆ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಕೆಲಸಗಳು ಈ ಭೇಟಿಯಲ್ಲಿ ಆಗಿವೆ.

ಭಾರತದ ಪಾಲಿಗೆ ರಿಯಾಧ್‌ ಜತೆಗಿನ ಈ ನಿಕಟ ಸಂಬಂಧ ಹಲವು ಆಯಾಮಗಳಲ್ಲಿ ಮುಖ್ಯವಾಗಿದೆ. ಭಾರತದ ಸಾವಿರಾರು ಮಂದಿ ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿದ್ದು, ರಿಯಾಧ್‌ನ ಇತ್ತೀಚೆಗಿನ ಕೆಲವು ನೀತಿಗಳಿಂದಾಗಿ ಅವರ ಭವಿಷ್ಯ ಅತಂತ್ರವಾಗಿದೆ. ಈ ವಿಚಾರವಾಗಿ ಭಾರತ ಸರಕಾರ ಯುವರಾಜನ ಜತೆಗೆ ವ್ಯೂಹಾತ್ಮಕ ಮಾತುಕತೆ ನಡೆಸಬೇಕು ಎನ್ನುವುದು ಜನರ ನಿರೀಕ್ಷೆ. 

ಪಾಕಿಸ್ತಾನಕ್ಕೆ ಎಷ್ಟೇ ನೆರವು ನೀಡಿದರೂ ಅದು ಆ ದೇಶವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನವಾಗುವುದೇ ಹೊರತು ಸೌದಿಗೇನೂ ಲಾಭವಾಗದು. ಆದರೆ ಭಾರತದ ಜತೆಗಿನ ಪಾಲುದಾರಿಕೆಯಿಂದ ಎರಡೂ ದೇಶಗಳಿಗೆ ಲಾಭವಿದೆ ಎನ್ನುವುದನ್ನು ರಿಯಾಧ್‌ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ಭಾರತವನ್ನು ತನ್ನ ವ್ಯೂಹಾತ್ಮಕ ಪಾಲುದಾರನೆಂದು ಪರಿಗಣಿಸಿದೆ. ಭಾರತ ಸೇರಿ ಎಂಟು ದೇಶಗಳಿಗೆ ಮಾತ್ರ ಸೌದಿ ಈ ಸ್ಥಾನಮಾನ ನೀಡಿದೆ. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಮುಂದಿನ ಹೆಜ್ಜೆಯಿಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next