ಗುರುಗ್ರಾಮ: ಭಾರತದ ಪ್ರಧಾನ ವೇಗಿ ಮೊಹಮ್ಮದ್ ಶಮಿ ಕಡೆಯಿಂದ ಸಿಹಿ ಸುದ್ದಿ ಬಿತ್ತರಗೊಂಡಿದೆ. ತಾನೀಗ ನೋವಿನಿಂದ ಮುಕ್ತನಾಗಿದ್ದೇನೆ. ಒಂದೆರಡು ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿ, ಮುಂದಿನ ತಿಂಗಳ ಆಸ್ಟ್ರೇಲಿಯ ಪ್ರವಾಸಕ್ಕೆ ಸಜ್ಜಾಗಲಿದ್ದೇನೆ ಎಂದಿದ್ದಾರೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಬಳಿಕ ಮೊಹಮ್ಮದ್ ಶಮಿ ಯಾವುದೇ ಪಂದ್ಯವಾಡಿಲ್ಲ. ಆದರೆ ರವಿವಾರ ಬೆಂಗಳೂರು ಟೆಸ್ಟ್ ಮುಗಿದ ಬಳಿಕ ನೆಟ್ಸ್‌ನಲ್ಲಿ ಕಾಣಿಸಿಕೊಂಡ ಅವರು ಸಂಪೂರ್ಣ ದೈಹಿಕ ಕ್ಷಮತೆಯೊಂದಿಗೆ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
“ನಿನ್ನೆ ಬೌಲಿಂಗ್ ನಡೆಸಿದ ರೀತಿಯಿಂದ ಸಮಾಧಾನವಾಗಿದೆ. ಇದಕ್ಕೂ ಮುನ್ನ ಅರ್ಧ ರನ್‌ಅಪ್‌ನಿಂದ ಬೌಲಿಂಗ್ ಆರಂಭಿಸುತ್ತಿದ್ದೆ. ಆದರೆ ನಿನ್ನೆ ಎಂದಿನಂತೆ 100 ಪ್ರತಿಶತ ಸಾಮರ್ಥ್ಯದೊಂದಿಗೆ ಬೌಲಿಂಗ್ ನಡೆಸಿದೆ’ ಎಂದು ಶಮಿ ಹೇಳಿದರು.
“ನಾನೀಗ ನೋವಿನಿಂದ 100 ಪ್ರತಿಶತ ಮುಕ್ತನಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ನಾನು ಆಸ್ಟ್ರೇಲಿಯ ಪ್ರವಾಸಕ್ಕೆ ಲಭ್ಯನಾಗುತ್ತೇನೋ ಇಲ್ಲವೋ ಎಂಬುದನ್ನು ಅರಿಯಲು ಎಲ್ಲರೂ ಕುತೂಹಲಗೊಂಡಿದ್ದಾರೆ. ಇದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಿದೆ’ ಎಂದಿದ್ದಾರೆ.
ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ (ನ. 22) ಎರಡು ವಾರ ಮೊದಲು ಆಸ್ಟ್ರೇಲಿಯಕ್ಕೆ ತೆರಳುವ ಸಾಧ್ಯತೆ ಇದೆ. ಆಗ ಶಮಿಗೆ 2 ರಣಜಿ ಪಂದ್ಯಗಳನ್ನು ಆಡುವ ಅವಕಾಶ ಲಭಿಸುತ್ತದೆ. ಕೇರಳ ವಿರುದ್ಧ ತವರಲ್ಲಿ ಹಾಗೂ ಕರ್ನಾಟಕ ವಿರುದ್ಧ ಬೆಂಗಳೂರಿನಲ್ಲಿ ಈ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯ ಪ್ರವಾಸಕ್ಕೂ ಮೊದಲು ಹೆಚ್ಚಿನ ಸಮಯವನ್ನು ಅಂಗಳದಲ್ಲಿ ಕಳೆಯುವುದು ಶಮಿ ಗುರಿ.