ಚಂಡೀಗಢ: ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ಕಚೇರಿಯ ಮೇಲೆ ಸೋಮವಾರ ರಾತ್ರಿ ನಡೆದ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯ ಹೊಣೆಯನ್ನು ಖಲಿಸ್ಥಾನಿ ಪರ ಗುಂಪಾಗಿರುವ “ಸಿಕ್ಖ್ ಫಾರ್ ಜಸ್ಟೀಸ್’ (ಎಸ್‌ಎಫ್ ಜೆ) ಹೊತ್ತುಕೊಂಡಿದೆ.
ಹಿಮಾಚಲ ಪ್ರದೇಶ ಸಿಎಂ ಜೈರಾಂ ಠಾಕೂರ್‌ರವರಿಗೆ ಕಳುಹಿಸಲಾಗಿರುವ ಧ್ವನಿ ಸಂದೇಶದಲ್ಲಿ ಎಸ್‌ಎಫ್ಜೆ ಈ ವಿಷಯ ಹೇಳಿ ಕೊಂಡಿದೆ. ಧ್ವನಿ ಸಂದೇಶದಲ್ಲಿ ಎಸ್‌ಎಫ್ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಅವರ ಧ್ವನಿಯಿದೆ. ಅದರಲ್ಲಿ ಹಿಮಾಚಲ ಪ್ರದೇಶದಲ್ಲಿ ಸಿಕ್ಖ್ರಿಗೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡಲಾಗಿದೆ.
“ಇದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಒಂದು ಪಾಠ. ಪಂಜಾಬ್‌ನ ಮೊಹಾಲಿ ಪೊಲೀಸ್ ಮುಖ್ಯ ಕಚೇರಿಯಲ್ಲಿ ಆಗಿದ್ದನ್ನು ನೋಡಿ ಕಲಿಯಿರಿ. ಇದೇ ರೀತಿ ಶಿಮ್ಲಾದ ಪೊಲೀಸ್ ಮುಖ್ಯ ಕಚೇರಿಯಲ್ಲೂ ದಾಳಿಯಾಗಬಹುದು. ಹಿಮಾಚಲದಲ್ಲಿ ಖಲಿಸ್ಥಾನ ಜನಾಭಿಪ್ರಾಯ ಸಂಗ್ರಹವನ್ನು ಜೂನ್ 6ರಂದು ಘೋಷಿಸಲಿದ್ದೇವೆ. ಆಗ ನೀವು ಸಿಕ್ಖ್ರನ್ನು ಕೆರಳಿಸಿ, ಹಿಂಸೆಗೆ ಕಾರಣರಾಗ ಬೇಡಿ’ ಎಂದು ಪನ್ನು ಎಚ್ಚರಿಸಿದ್ದಾರೆ.
ರವಿವಾರವಷ್ಟೇ, ಇದೇ ಸಂಘಟನೆ ಹಿಮಾಚಲ ಪ್ರದೇಶದ ವಿಧಾನಸಭೆಯ ಗೇಟಿನ ಮೇಲೆ ಎಸ್‌ಎಫ್ ಜೆ ಖಲಿಸ್ಥಾನದ ಧ್ವಜ ಹಾರಿಸಿ, ಖಲಿಸ್ಥಾನ್ ಪರ ಘೋಷಣೆ ಬರೆದು, ಸಿಎಂಗೆ ಎಚ್ಚರಿಕೆಯ ವೀಡಿಯೋ ಸಂದೇಶ ಬಿಡುಗಡೆ ಮಾಡಿತ್ತು. ಆ ಪ್ರಕರಣದಲ್ಲಿ ಪನ್ನು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.