ಕುಂಬಳೆ: ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ತಾಯಿ ಮತ್ತು ಮಗು ಸಾವಿಗೀಡಾದ ಘಟನೆ ಮೊಗ್ರಾಲ್ ನಾಂಗಿಯಲ್ಲಿ ಎ. 20ರಂದು ರಾತ್ರಿ ಸಂಭವಿಸಿದೆ.
ಮೊಗ್ರಾಲ್ ನಾಂಗಿಯ ಅಲಿ ಅವರ ಪತ್ನಿ ಸುಹೈರಾ (24) ಮತ್ತು ಪುತ್ರ ಮೊಹಮ್ಮದ್ ಷಹ್‌ಸಾದ್ (3) ಸಾವಿಗೀಡಾದರು. ಉಮ್ರಾ ಪ್ರವಾಸದಿಂದ ಮರಳಿದ್ದ ಕುಂಬಳೆ ಪೇರಾಲ್ ನಿವಾಸಿಗಳಾದ ಸಂಬಂಧಿಕರನ್ನು ಕಾಣಲೆಂದು ಸುಹೈರಾ ಅವರು ಪುತ್ರ ಮತ್ತು ಅತ್ತೆ ಜತೆ ತೆರಳಿದ್ದರು.
ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿ ಸಮೀಪವೇ ಸುಹೈರಾ ಅವರ ಮನೆ ಇದೆ. ರಾತ್ರಿ ವಾಪಸಾಗುತ್ತಿದ್ದಾಗ ಅತ್ತೆ ಹಳಿ ದಾಟಿ ಮನೆಗೆ ತಲುಪಿದ್ದಾರೆ. ಆದರೆ ಸುಹೈರಾ ಮತ್ತು ಪುತ್ರ ಮನೆಗೆ ತಲುಪದ ಹಿನ್ನೆಲೆಯಲ್ಲಿ ಅತ್ತೆ ಹುಡುಕಿಕೊಂಡು ಮರಳಿದಾಗ ಮಂಗಳೂರು ಭಾಗಕ್ಕೆ ತೆರಳುವ ರೈಲು ಹಳಿಯಲ್ಲಿ ಅವರಿಬ್ಬರ ಶವಗಳು ಪತ್ತೆಯಾದವು.
ಅವರು ಹಳಿ ದಾಟುವ ಸಂದರ್ಭ ಎರಡೂ ಹಳಿಗಳಲ್ಲಿ ರೈಲು ಏಕಕಾಲದಲ್ಲಿ ಆಗಮಿಸಿದ್ದರಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರು ಭಾಗದಿಂದ ರೈಲು ಆಗಮಿಸುವ ಮೊದಲು ಸುಹೈರಾ ಹಾಗೂ ಪುತ್ರ ಒಂದು ಹಳಿ ದಾಟಿದ್ದು ಇನ್ನೊಂದನ್ನು ದಾಟುವಾಗ ಕಾಸರಗೋಡು ಕಡೆಯಿಂದ ರೈಲು ಬಂದದ್ದು ಅವರ ಗಮನಕ್ಕೆ ಬಂದಿರದೆ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದೆ. ಸುಹೈರಾ ಅವರ ಪತಿ ಅಲಿ ದುಬಾೖಯಲ್ಲಿದ್ದು ಅವರು ಬಂದ ಬಳಿಕವೇ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.
ರೈಲು ಹಳಿ ದ್ವಿಗುಣ ಆದ ಬಳಿಕ ಈ ಪ್ರದೇಶದಲ್ಲಿ ರೈಲು ಢಿಕ್ಕಿ ಹೊಡೆದು ವರ್ಷದ ಹಿಂದೆ ಐವರು ಸಾವಿಗೀಡಾಗಿದ್ದರು.