Advertisement

CM Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು

10:09 PM May 27, 2024 | Team Udayavani |

ಬೆಂಗಳೂರು: “ದೇವರೇ ನನ್ನನ್ನು ಕಳುಹಿಸಿದ್ದು’ ಎಂದಿರುವ ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರು ಮುಗಿಬಿದ್ದಿದ್ದು, ಮೋದಿ ಸರ್ಕಾರವನ್ನೂ ಟೀಕಿಸಿದ್ದಾರೆ.

Advertisement

ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರಿಗೆ ಬಿಜೆಪಿ, ಎನ್‌ಡಿಎ ಸೋಲು ಖಚಿತವಾಗಿ ಗೊತ್ತಾಗಿದೆ. ಹತಾಶೆಯಿಂದ ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು ಎಂದು ಮಾತಾಡುತ್ತಿದ್ದಾರೆ. ಅವರ ಸೋಲು ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ ಎಂದು ವ್ಯಂಗ್ಯವಾಡಿದರು.

ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶವನ್ನು ಮಾರ್ಪಡಿಸಲು ಬಿಜೆಪಿ ಮತ್ತು ಮೋದಿ ಯತ್ನಿಸುತ್ತಿದ್ದು ಇದಕ್ಕೆ ಭಾರತೀಯರು ಅವಕಾಶ ಕೊಡುವುದಿಲ್ಲ. ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಆಶಯಗಳಲ್ಲಿ ದೇಶವನ್ನು ಮುನ್ನಡೆಸುವುದು ಕಾಂಗ್ರೆಸ್‌ ಪಕ್ಷ ಮಾತ್ರ. ನೆಹರು, ಇಂದಿರಾಗಾಂಧಿ ಅವಧಿಯಲ್ಲಿ ಭೂ ಸುಧಾರಣೆ ಮಾಡಿದರು. ಕೈಗಾರಿಕೆಗಳನ್ನು ಸ್ಥಾಪಿಸಿದರು. ಈಗ ಬಿಜೆಪಿ ಇದಕ್ಕೆ ವಿರುದ್ಧ ಕೆಲಸ ಮಾಡುತ್ತಿದೆ. ರೈತರಿಂದ ಭೂಮಿ ಕಿತ್ತುಕೊಳ್ಳುವುದು , ದೇಶದ ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಬಿಜೆಪಿಯ ಸಾಧನೆ ಎಂದರು.

ಪ್ರಧಾನಸೇವಕ ದೇವಪುತ್ರನೇ?: ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಎರಡು ಅವಧಿಗೆ ಪ್ರಧಾನಿಯಾದ ಮೋದಿ ಪ್ರಧಾನ ಸೇವಕನಿಂದ ದೇವಪುತ್ರ ಅಥವಾ ಸ್ವಯಂ ದೇವರೇ ಆಗಿ ಬದಲಾಗಿಬಿಟ್ಟಿದ್ದಾರೆ. ಸಂಬಿತ್‌ ಪಾತ್ರರಂತಹ ಭಕ್ತರ ಮನಸ್ಸನ್ನೂ ಈ ನಿಟ್ಟಿನಲ್ಲಿ ಓಲೈಸುವುದರಲ್ಲಿ ನಿಷ್ಣಾತರು. ಜಗನ್ನಾಥನೇ ಮೋದಿಯ ಭಕ್ತ ಎಂದು ಬೇಕಿದ್ದರೂ ಒಪ್ಪಿಸಿಬಿಟ್ಟಾರು. ಪದೇ ಪದೆ ದೈವಿಕತೆಯ ಪ್ರತಿಪಾದನೆ ಮಾಡುತ್ತಿರುವುದು ಕೇವಲ ಹತಾಶೆ ಅಥವಾ ಹುಚ್ಚುತನ ಎಂದು ಟೀಕಿಸಿದ್ದಾರೆ.

ದೇವದೂತ ಬಂದ ನಂತರವೇ ಇವೆಲ್ಲಾ
ಆದದ್ದು: ಎಚ್‌.ಸಿ.ಮಹದೇವಪ್ಪ
ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಕೂಡ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, ದೇವದೂತ ಬಂದ ನಂತರವೇ 72 ರೂಪಾಯಿ ಇದ್ದ ಪೆಟ್ರೋಲ್‌ ಬೆಲೆ 100 ರೂಪಾಯಿಗೆ ಏರಿತು, 60 ರೂ. ಇದ್ದ ಡೀಸೆಲ್‌ 85ಕ್ಕೆ ಏರಿಕೆಯಾಯಿತು, ಡಾಲರ್‌ ಎದುರು ರೂಪಾಯಿ ಭಾರೀ ಕುಸಿತ ಕಂಡಿತು. ಅಡುಗೆ ಸಿಲಿಂಡರ್‌ ಬೆಲೆ 400 ರಿಂದ 1000 ರೂಪಾಯಿಗೆ ಏರಿಕೆ ಕಂಡಿತು, ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು ಎಂದು ಟೀಕಿಸಿದ್ದಾರೆ.

Advertisement

ಭಾರತ ಜಾಾಗತಿಕ ಹಸಿವಿನ ಸೂಚ್ಯಂಕದಲ್ಲಿ 55 ರಿಂದ 102 ನೇ ಸ್ಥಾನಕ್ಕೆ ಕುಸಿಯಿತು, ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು, ಕರೋನಾ ಸಂದರ್ಭದಲ್ಲಿ ಆಕ್ಸಿಜನ್‌ ದೊರಕದೇ ಲೆಕ್ಕವಿಲ್ಲದಷ್ಟು ಸಾವು ನೋವುಗಳಾಯಿತು, ಚೀನಾವು ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು, ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು, ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ಕೋರ್ಟ್‌ ಮೆಟ್ಟಿಲೇರಿ ಪಡೆಯುವಂತೆ ಆಯಿತು, ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು, ದೇಶದ ಸಾಲವು 55 ಲಕ್ಷ ಕೋಟಿಗಳಿಂದ 185 ಲಕ್ಷ ಕೋಟಿಗೆ ಏರಿಕೆ ಆಯಿತು ಎಂದು ಪಟ್ಟಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next