ವಿಜಯಪುರ: ರಾಜ್ಯದಲ್ಲಿ ನದಿಗಳು ಹರಿದರೂ ನೀರು ಬಳಸಲು ಕೇಂದ್ರ ಸರ್ಕಾರ ಅನುಮತಿಸುತ್ತಿಲ್ಲ. ಆದರೆ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುವ ಪ್ರಧಾನಿ ಮೋದಿ ನಡೆ ಖೋಖೋ ಆಟದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯ ಭೇಟಿ ಖೋ ಖೋ ಕ್ರೀಡೆಯಂತಾಗಿದೆ. ಬರ್ತಾರೆ, ಹೋಗ್ತಾರೆ. ಲಗೋರಿ ಆಟನಾ, ಖೋ ಖೋ ಆಟನಾ ಎಂದು ತಿಳಿಯದಾಗಿದೆ ಎಂದರು.
ಕೇಂದ್ರ ಸರ್ಕಾರ ಎಂದೂ ರಾಜ್ಯದ ಸಮಸ್ಯೆಗೆ ಸ್ಪಂದಿಸಿಲ್ಲ. ನದಿ ನೀರು ಹಂಚಿಕೆಗೆ ನಿರ್ಲಕ್ಷ್ಯ ಮಾಡಿದವರು ಈಗ ಮತ ಕೇಳುವುದಕ್ಕೆ ಬರ್ತಾರೆ. ಕಲಬುರ್ಗಿಗೆ ಬಂದಿದ್ದಾರೆ, ನದಿಗಳು ಹರಿಯುತ್ತಿವೆ. ರಾಜ್ಯದ ನದಿ ನೀರು ಬಳಕೆ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ಅನುಮತಿ ನೀಡುತ್ತಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ನೀರಿದೆ, ಒಣಭೂಮಿ ಪ್ರದೇಶವಿದೆ. ಕೆಲಸ ಮಾಡದೇ ಬಂದ್ರೆ ಜನ ಮೆಚ್ಚಿಕೊಳ್ಳುತ್ತಾರಾ ಎಂದು ಪ್ರಶ್ನಿಸಿ, ಕರ್ನಾಟಕದ ಜನತೆ ಬಹಳ ಬುದ್ಧಿವಂತರಿದ್ದಾರೆ ಎಂದರು.
ಜನ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಬೇಸತ್ತು ಹೋಗಿದ್ದಾರೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕೆಂದು ಜನರಲ್ಲಿ ಅಂಡರ್ ಕರೆಂಟ್ ಪಾಸ್ ಆಗ್ತಿದೆ. ಪಂಚರತ್ನ ಯಾತ್ರೆಯಲ್ಲಿ ಈ ಅಂಶ ಕಂಡುಬಂದಿದೆ ಎಂದರು.