ಸುಳ್ಯ: ರೈತರ ಸಾಲ ಮನ್ನಾ ಪಾಪದ ಕೆಲಸ ಎಂದು ಹೇಳುವ ನರೇಂದ್ರ ಮೋದಿ ಹೃದಯಹೀನ ಪ್ರಧಾನಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ರವಿವಾರ ದ.ಕ.ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರ ಪರ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾದಾಗ ಮೋದಿ ಸರಕಾರ ಸಹಾಯ ಮಾಡಿಲ್ಲ. ಗೋರಖ್‌ಸಿಂಗ್ ವರದಿ ಜಾರಿ ಮಾಡಿಲ್ಲ. ಆದರೆ ರಾಜ್ಯದ ಮೈತ್ರಿ ಸರಕಾರ 44 ಲಕ್ಷ ರೈತರ ಸಾಲ ಮನ್ನಾ ಮಾಡಿ, ಈಗಾಗಲೇ 15,58,000 ರೂ. ಬಿಡುಗಡೆ ಮಾಡುವ ಮೂಲಕ ನೆರವು ನೀಡಿದೆ ಎಂದರು.
ಇಸ್ರೇಲ್ ಪದ್ಧತಿ ಕೃಷಿಗಾಗಿ 450 ಕೋ.ರೂ. ಬಿಡುಗಡೆ, ಸರಕಾರಿ ಪ್ರಾಥಮಿಕ, ಹೈಸ್ಕೂಲು, ಕಾಲೇಜುಗಳಿಗೆ ಕಟ್ಟಡ ಒದಗಿಸಲು 1,200 ಕೋ.ರೂ. ಅನುದಾನ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅನಾರೋಗ್ಯ ಪೀಡಿತ ಫಲಾನುಭವಿಗೆ ಒಟ್ಟು 85 ಕೋ.ರೂ. ನೆರವು ಮೊದಲಾದ ನೂರಾರು ಕಾರ್ಯಕ್ರಮಗಳು ನಮ್ಮ ಸರಕಾರದ ಸಾಧನೆ ಎಂದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಕರಾವಳಿ ಭಾಗದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸಂಸದ ನಳಿನ್ ಕುಮಾರ್ ಕಟೀಲು ಈ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ ಈ ಬಾರಿ ಯುವ ಅಭ್ಯರ್ಥಿ ಮಿಥುನ್ ರೈ ಅವರನ್ನು ಜಿಲ್ಲೆಯ ಜನರು ಗೆಲ್ಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಪ್ರೊ| ಕೆ.ಇ. ರಾಧಾಕೃಷ್ಣ, ಅಭ್ಯರ್ಥಿ ಮಿಥುನ್ ರೈ ಮಾತನಾಡಿದರು.ನಾಯಕರಾದ ಹರೀಶ್ ಕುಮಾರ್, ಭೋಜೇಗೌಡ, ಅಮರನಾಥ ಶೆಟ್ಟಿ, ಬಿ. ರಮಾನಾಥ ರೈ, ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು. ಭರತ್ ಮುಂಡೋಡಿ ಪ್ರಸ್ತಾವನೆಗೈದರು. ಎನ್. ಜಯಪ್ರಕಾಶ್ ರೈ ಸ್ವಾಗತಿಸಿದರು. ಎಂ.ಬಿ. ಸದಾಶಿವ ಕಾರ್ಯಕ್ರಮ ನಿರೂಪಿಸಿದರು.